ವೀಕೆಂಡ್ ಕರ್ಫ್ಯೂ ವಿರೋಧಿಸಿ ವ್ಯವಹಾರ ನಡೆಸಲು ಪುತ್ತೂರು ವರ್ತಕರ ಸಂಘ ತೀರ್ಮಾನ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟೀವಿಟಿ ರೇಟ್ ಕಡಿಮೆಯಾಗದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಈ ವಾರವೂ ವೀಕೆಂಡ್ ಕರ್ಫೂ ಹೇರಲಾಗಿದೆ. ಆದರೆ ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಇದೀಗ ವರ್ತಕರ ಸಂಘ ವಿರೋಧ ವ್ಯಕ್ತಪಡಿಸಲಾರಂಭಿಸಿದೆ. ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು ನಗರ, ಉಪ್ಪಿನಂಗಡಿ ಹಾಗೂ ನೆಲ್ಯಾಡಿ ಪೇಟೆಗಳಲ್ಲಿ ಈ ವಾರ ವೀಕಂಡ್ ಕರ್ಫೂ ನಲ್ಲಿ ತಮ್ಮ ಅಂಗಡಿ-ಮುಂಗಟ್ಟುಗಳನ್ನು ತೆರೆದಿಟ್ಟು, ಕೊರೊನಾ ಮಾರ್ಗಸೂಚಿ ಉಲ್ಲಂಘಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಗಡಿ ಭಾಗವಾದ ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟೀವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಪಾಸಿಟೀವ್ ಪ್ರಕರಣಗಳು ಹೆಚ್ಚಾಗುತ್ತಿದೆ. ಅಲ್ಲದೆ ಕೊರೊನಾ ಸಾವಿನ ಪ್ರಕರಣದಲ್ಲೂ ಜಿಲ್ಲೆಯಲ್ಲಿ ಕಡಿಮೆಯಾಗದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕೊರೊನಾ ನಿಯಂತ್ರಣ ಮಾರ್ಗಸೂಚಿಯನ್ನು ಜಾರಿಗೆ ತರಲಾಗಿದೆ. ಅಲ್ಲದೆ ಕೇರಳವನ್ನು ಸಂಪರ್ಕಿಸುವ ಜಿಲ್ಲೆಯ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಕೊರೊನಾ ತಪಾಸಣಾ ಕೇಂದ್ರ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗಿದೆ. ಕೇರಳ ಭಾಗದಿಂದ ಜಿಲ್ಲೆಗೆ ಆಗಮಿಸುವ ಜನ ಕಡ್ಡಾಯವಾಗಿ 27 ಗಂಟೆಗಳ ಆರ್.ಟಿ.ಪಿ.ಸಿ.ಆರ್ ನೆಗೆಟೀವ್ ವರದಿ ಹೊಂದಿರುವಂತೆ ಆದೇಶವನ್ನೂ ಹೊರಡಿಸಲಾಗಿದೆ.
ಜಿಲ್ಲೆಯಲ್ಲಿ ಈಗಲೂ ಕೊರೊನಾ ಪಾಸಿಟೀವ್ ರೇಟ್ ಇನ್ನೂ 2 ರ ಆಸುಪಾಸಿನಲ್ಲಿರುವ ಕಾರಣ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕೊರೊನಾ ಮಾರ್ಗಸೂಚಿಯನ್ನು ಜಾರಿಗೆ ತರುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕಾರಣಕ್ಕಾಗಿಯೇ ಜಿಲ್ಲೆಯಲ್ಲಿ ವೀಕೆಂಡ್ ಕರ್ಫೂವನ್ನು ಜಾರಿಗೆ ತರಲಾಗಿದ್ದು, ಈ ವಾರವೂ ಕರ್ಫೂ ನಿಯಮವನ್ನು ಜಾರಿಯಲ್ಲಿರಲಿದ್ದು, ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಜಿಲ್ಲೆಯ ಪುತ್ತೂರು ತಾಲೂಕಿನ ವರ್ತಕರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ವಾರ ವೀಕೆಂಡ್ ಕರ್ಫೂವನ್ನು ಹೇರಬಾರದಂದೆ ಸರಕಾರ ಸೇರಿದಂತೆ ಸ್ಥಳೀಯ ಶಾಸಕರಿಗೂ ಮನವಿ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಸರಕಾರದ ಸೂಚನೆಯಂತೆ ಈ ವಾರವೂ ಕರ್ಫೂ ಜಾರಿಯಲ್ಲಿರಲಿದೆ ಎನ್ನುವ ಮಾಹಿತಿ ನೀಡಿದ ಕಾರಣ ಇದೀಗ ಪುತ್ತೂರಿನ ವರ್ತಕ ಸಂಘ ಕೆರಳಿದ್ದು, ಈ ಬಾರಿ ಕರ್ಫೂವನ್ನು ಉಲ್ಲಂಘಿಸಲು ನಿರ್ಧರಿಸಿದೆ.
ಶನಿವಾರ ಹಾಗೂ ಭಾನುವಾರದಂದೇ ತಮಗೆ ಹೆಚ್ಚಿನ ವ್ಯಾಪಾರವಾಗುತ್ತಿದ್ದು, ಈ ಕಾರಣಕ್ಕಾಗಿ ವೀಕೆಂಡ್ ಕರ್ಫೂವನ್ನು ಹಿಂಪಡೆಯಬೇಕೆನ್ನುವುದು ವರ್ತಕರ ಸಂಘದ ಒತ್ತಾಯವಾಗಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಎಂದಿನಂತೆ ತೆರೆದಿಡಲಾಗುವುದು ಎನ್ನುವ ಎಚ್ಚರಿಕೆಯನ್ನೂ ವರ್ತಕರ ಸಂಘ ಈಗಾಗಲೇ ಜಿಲ್ಲಾಡಳಿತಕ್ಕೆ ನೀಡಿದ್ದು, ನಾಳಿನ ವೀಕೆಂಡ್ ಕರ್ಫೂ ಯಾವ ರೀತಿ ಇರಲಿದೆ ಎನ್ನುವ ಕುತೂಹಲ ಇದೀಗ ಜಿಲ್ಲೆಯ ಜನರಲ್ಲಿದೆ. ವರ್ತಕರ ಈ ನಿರ್ಧಾರಕ್ಕೆ ಜಿಲ್ಲಾಡಳಿತವೂ ಸಜ್ಜುಗೊಂಡಿದ್ದು, ಕರ್ಪೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿರ್ಧಾರಕ್ಕೆ ಬಂದಿದೆ. ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಕಾರ್ಯಾಚರಿಸುವ ಅಂಗಡಿಗಳ ವಿರುದ್ಧ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಲು ಆಯಾಯ ಸ್ಥಳಿಯಾಡಳಿತಕ್ಕೆ ಈಗಾಗಲೇ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು, ಪೋಲೀಸರನ್ನು ಬಳಸಿ ನಿಯಮ ಪಾಲಿಸುವಂತೆ ಸೂಚಿಸಿದ್ದಾರೆ. ಜಿಲ್ಲಾಡಳಿತದ ಈ ಕ್ರಮಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಕೂಡಾ ಸಮರ್ಥಿಸಿಕೊಂಡಿದ್ದು, ಸರಕಾರದ ಮಾರ್ಗಸೂಚಿಯನ್ನು ವರ್ತಕರು ಪಾಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.