ಶಿಥಿಲಾವಸ್ಥೆಯಲ್ಲಿರುವ ಕೊಂಗೂರು ಪ್ರದೇಶದ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ: ರಸ್ತೆ ದುರಸ್ಥಿಗೆ ಸ್ಥಳೀಯ ನಾಗರಿಕರ ಆಗ್ರಹ

 ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪದವು 35ನೇ ಸೆಂಟ್ರಲ್ ವಾರ್ಡ್ ಕುಲಶೇಖರದ ಕೊಂಗೂರು ಮಠದ ಕ್ಷೇತ್ರದ ಮುಖ್ಯ ಸಂಪರ್ಕ ರಸ್ತೆಯ ಮುಂಭಾಗ ರೈಲ್ವೇಯಿಂದ ಸಂಪೂರ್ಣ ತಡೆಹಿಡಿಯಲಾಗಿದೆ ಮತ್ತು ರಸ್ತೆ, ಒಳಚರಂಡಿ ವ್ಯವಸ್ಥೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಶೀಘ್ರದಲ್ಲಿ ರಸ್ತೆ ದುರಸ್ಥಿಗೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.


ಸುಮಾರು 50 ವರ್ಷ ಹಿಂದಿನಿಂದಲೂ ಕೊಂಗೂರು ಮಠ ಮುಖ್ಯ ರಸ್ತೆ ಎಂದು ಗುರುತಿಸ್ಪಟ್ಟಿದ್ದು, ಈ ಕೊಂಗೂರು ಮುಖ್ಯ ರಸ್ತೆಯ ಕೊಂಗೂರು ಕ್ಷೇತ್ರದ ಎರಡು ದೇವಸ್ಥಾನಗಳಿಗೆ ಮತ್ತು ಅದರ ಸಭಾಭವನಗಳಿಗೆ ಹಾಗೂ 250ಕ್ಕಿಂತ ಹೆಚ್ಚಿನ ಮನೆಗಳಿಗೆ ಸಂಪರ್ಕಿಸುವ ಮುಖ್ಯ ಸಾರ್ವಜನಿಕ ರಸ್ತೆಯಾಗಿದೆ. ಈಗಾಗಲೇ ಮುಖ್ಯ ಸಂಪರ್ಕ ರಸ್ತೆಗೆ 12 ವರ್ಷಗಳಿಂದ ದಾರಿದೀಪದ 5 ವರ್ಷಗಳಿಂದ ಒಳಚರಂಡಿ ವ್ಯವಸ್ಥೆಯನ್ನು ಮಹಾನಗರ ಪಾಲಿಕೆಯವರು ನೀಡಿದ್ದಾರೆ. ಆದರೆ ಪ್ರತಿ ವರ್ಷವೂ ಈ ಮುಖ್ಯ ರಸ್ತೆಯ ದುರಸ್ತಿ ಕಾರ್ಯ ಮಾಡಬೇಕಾಗುತ್ತದೆ. ರಸ್ತೆಯ ಮಳೆ ನೀರಿನ ಚಂಡಿಯಿ ದುರಸ್ತಿ, ಒಳ ಚರಂಡಿ ದುರಸ್ತಿ ಸುವ್ಯವಸ್ಥೆ ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದೆ.

ದಕ್ಷಿಣ ವಿಭಾಗದ ರೈಲ್ವೆಯ ಡಬಲ್ ಟ್ರ್ಯಾಕ್ ಕಾಮಗಾರಿಯು ಕಳೆದ 7 ವರ್ಷಗಳಿಂದ ಈ ಪ್ರದೇಶದಲ್ಲಿ ನಡೆಯುತ್ತಿದ್ದು, ಬಹಳ ನಿಧಾನಗತಿಯಿಂದ ಸಾಗುತ್ತಿದೆ. ಆದರೆ ಇತ್ತೀಚೆಗೆ ರಸ್ತೆಯ ಮುಂಭಾಗದಲ್ಲಿ ರೈಲ್ವೇಯ ಅವೈಜ್ಞಾನಿಕ ಕಾಮಗಾರಿಕೆಯಿಂದಾಗಿ ಮೊದಲ ಮಳೆಯಲ್ಲಿ ಈ ಮುಖ್ಯ ಸಂಪರ್ಕ ರಸ್ತೆಯು ಕುಸಿದು ಹೋಗಿ ಅವಘಡ ಸಂಭವಿಸಿದೆ. ಈಗ ಈ ರಸ್ತೆಯ ಮುಂಭಾಗವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಅಲ್ಲದೇ ರೈಲ್ವೇ ಕಾಮಗಾರಿಯಿಂದಾಗಿ ಸಂಪರ್ಕ ರಸ್ತೆ ಒಳಚರಂಡಿಯು ಹಾನಿಗೊಳಗಾಗಿದೆ. ಮಳೆ ನೀರಿನ ಚರಂಡಿ ಹದಗೆಟ್ಟಿದ್ದು, ಒಳ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ.

 ಈ ಸಮಸ್ಯೆಯ ಬಗ್ಗೆ ಮಾತನಾಡಿದ ಸ್ಥಳೀಯರಾದ ಗಣೇಶ್ ಹೆಬ್ಬಾರ್ ಅವರು, ಹಲವಾರು ಬಾರಿ ರಸ್ತೆ ಸಮಸ್ಯೆಯ ಬಗ್ಗೆ ಪಾಲಿಕೆಯ ಆಯುಕ್ತರಿಗೆ ಮತ್ತು ಜನಪ್ರತಿನಿಧಿಗಳಿಗೆ ವಿಚಾರ ತಿಳಿಸಿದ್ದೇವೆ. ಇಲ್ಲಿನ ಸಮಸ್ಯೆಯ ಬಗ್ಗೆ ತಿಳಿಸಿದ ಕೂಡಲೇ ಈ ಪ್ರದೇಶದವನ್ನು ಪರಿಶೀಲನೆ ನಡೆಸಿ ಸರಿಪಡಿಸುವ ಭರವಸೆಯನ್ನು ನೀಡಿದ್ದಾರೆ. ಪ್ರತೀ ವರ್ಷ ಮಳೆಗಾಲ ಬಂದಾಗ ಇದೇ ಪರಿಸ್ಥಿತಿ ಉಂಟಾಗುತ್ತಿದೆ. ಈ ಪ್ರದೇಶದಲ್ಲಿ ಎರಡು ದೇವಸ್ಥಾನಗಳಿವೆ ಮಾತ್ರವಲ್ಲದೆ ಆಶ್ರಮ ಕೂಡ ಇದೆ. ಇಲ್ಲಿನ ಸ್ಥಳೀಯರಿಗೆ ಈ ರಸ್ತೆಯಲ್ಲಿ ಸಂಚರಿಸಲಾಗದೆ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಇಲ್ಲಿನ ಸಮಸ್ಯೆಯನ್ನು ಸರಿಪಡಿಸಿಕೊಡಿ ಎಂದು ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.
 ಕೊಂಗೂರು ಪ್ರದೇಶದ ಸಮಸ್ಯೆ ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ಇದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಭರವಸೆಯನ್ನು ನೀಡುತ್ತಿದ್ದರೂ ಇದುವರೆಗೆ ಶಾಶ್ವತ ರಸ್ತೆ ನಿರ್ಮಾಣಗೊಂಡಿಲ್ಲ. ಮಳೆ ಬಂದ ಕೂಡಲೇ ರಸ್ತೆಯಲ್ಲಿ ನಡೆದಾಡಲು ತುಂಬಾ ತೊಂದರೆಯಾಗುತ್ತಿದೆ. ಇನ್ನು ಮತ್ತೊಂದು ಕಡೆ ರೈಲ್ವೇ ಟ್ರ್ಯಾಕ್ ಕೆಲಸ ಆಮೆಗತಿಯಲ್ಲೇ ಸಾಗುತ್ತಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ನೀಡಿದರೆ ಭರವಸೆ ಮಾತ್ರ ಕೊಡುತ್ತಾರೆ ಹೊರತು ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಇನ್ನಾದರೂ ಕೊಂಗೂರು ಪ್ರದೇಶದ ಪ್ರಮುಖ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಈಡೇರಿಸಲಿ ಎಂಬುವುದೇ ವಿ4 ನ್ಯೂಸ್‌ನ ಆಶಯ..

Related Posts

Leave a Reply

Your email address will not be published.