ಸರಕಾರಕ್ಕೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಇಲ್ಲ:ಮಾಜಿ ಸಚಿವ ರಮಾನಾಥ ರೈ
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ತೈಲ ಬೆಲೆ ಏರಿಕೆಯಿಂದ ಕಂಗೆಟ್ಟಿರುವಾಗಲೇ ವಿದ್ಯುತ್ ಮೀಟರ್ ದರ ಏರಿಕೆ ಮಾಡುವ ಮೂಲಕ ಜನರ ಹಸಿವಿನ ಹೊಟ್ಟೆಗೆ ಹೊಡೆದಂತಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ವಿದ್ಯುತ್ ಬೇಡಿಕೆಗಿಂತ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತದೆ. ಆದರೆ ಈ ನಡುವೆ ಅದಾನಿ ಕಂಪೆನಿ ಸೇರಿದಂತೆ ನಾನಾ ಕಂಪೆನಿಗಳಿಂದ ಸರಕಾರ ವಿದ್ಯುತ್ ಖರೀದಿಸುತ್ತಿದೆ. ಕಂಪೆನಿಗಳ ಅನುಕೂಲ ನೀತಿಯನ್ನು ಅನುಸರಿಸಿ ಜನರಿಗೆ ಸಂಕಷ್ಟ ಸಂದರ್ಭದಲ್ಲಿ ಹೊರೆ ನೀಡುತ್ತಿದೆ. ಸರಕಾರಕ್ಕೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಇಲ್ಲ. ಬದಲಾಗಿ ವ್ಯಾಪಾರಿಗಳಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ರಮಾನಾಥ ರೈ ಆರೋಪಿಸಿದರು.ಇಂಧನ ದರ ಏರಿಕೆಯಾಗಿ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಇಂತಹ ಸಂದರ್ಭದಲ್ಲಿ ಸಕಾರಣವಿಲ್ಲದೆ ವಿದ್ಯುತ್ ದರ ಏರಿಕೆಯನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.
ಮಾಜಿ ಶಾಸಕ ಜೆ.ಆರ್.ಲೋಬೋ ಮಾತನಾಡಿ, ಮೆಸ್ಕಾಂ, ಬೆಸ್ಕಾಂ ಹೊರತುಪಡಿಸಿ ಉಳಿದ ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳು ನಷ್ಟದಲ್ಲಿರಲು ಅವುಗಳ ಅದಕ್ಷತೆಯೇ ಕಾರಣ. ಮೆಸ್ಕಾಂ ವ್ಯಾಪ್ತಿಯ ದ.ಕ. ಹಾಗೂ ಉಡುಪಿಯಲ್ಲಿ ಗ್ರಾಹಕರಿಂದ ಸಮರ್ಪಕವಾಗಿ ವಿದ್ಯುತ್ ದರ ಪಾವತಿಯಾಗುತ್ತದೆ. ಹಾಗಿದ್ದರೂ ನಷ್ಟದ ನೆಪವೊಡ್ಡಿ ದರ ಏರಿಕೆಯ ಮೂಲಕ ಹೊರೆ ಹೇರುವುದಕ್ಕೆ ಅರ್ಥವಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಅಬ್ದುಲ್ ರವೂಫ್, ಭಾಸ್ಕರ್ ಕೆ., ಅಶೋಕ್ ಡಿ.ಕೆ., ಸದಾಶಿವ ಉಳ್ಳಾಲ್, ಅಪ್ಪಿ, ನವೀನ್ ಡಿಸೋಜ, ಪ್ರತಿಭಾ ಕುಳಾಯಿ, ಶಬೀರ್ ಸಿದ್ಧಕಟ್ಟೆ, ಬೇಬಿ ಕುಂದರ್, ಸುರೇಂದ್ರ ಕಾಂಬ್ಳಿ, ಅಬ್ಬಾಸ್ ಅಲಿ, ಲಾರೆನ್ಸ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.