ಮಂಗಳೂರು : ಆಧುನಿಕ ಕನ್ನಡ ಸಾಹಿತ್ಯದ ಅಗ್ರಪಂಕ್ತಿಯ ಸಾಹಿತಿಗಳಾದ ಪಂಜೆ ಮಂಗೇಶರಾಯರು ನೂರು ವರ್ಷಗಳ ಹಿಂದೆ ಕೋಟಿ ಚೆನ್ನಯ್ಯ ಕಥೆಯನ್ನು ಆಧುನಿಕ ಪರಿಭಾಷೆಯ ಕಥನವನ್ನಾಗಿ ಬರೆದ ಪ್ರಥಮ ಲೇಖಕರು ಎಂದು ತಂತ್ರಜ್ಞಾನಿ, ತತ್ವಜ್ಞಾನಿ ಕೆ. ಪಿ. ರಾವ್ ಅವರು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಥಿಯೇಟರ್ ಯಕ್ಷ ಸಂಸ್ಥೆಯ ಸಹಯೋಗದಲ್ಲಿ ತುಳು ಭವನದಲ್ಲಿ ಆಯೋಜಿಸಿದ ಯಕ್ಷಗಾನ ಸಾಧಕರ ಸಂಸ್ಮರಣೆ ಮತ್ತು ತುಳುತಿಟ್ಟಿನ ಯಕ್ಷಗಾನ ಪ್ರದರ್ಶನದಲ್ಲಿ ಪಂಜೆ ಮಂಗೇಶರಾಯರ ‘ಕೋಟಿ ಚೆನ್ನಯ’ ಕತೆಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಪ್ರಸ್ತುತ ಪಂಜೆಯವರ ಕೋಟಿ ಚೆನ್ನಯ ಕತೆಯು ನೂರು ವರ್ಷಗಳನ್ನು ಆಚರಿಸುತ್ತಿದೆ. ಆಧುನಿಕ ಮನೋಧರ್ಮಕ್ಕೆ ಅನುಗುಣವಾಗಿ ಕೋಟಿ ಚೆನ್ನಯ್ಯ ಕಥನವನ್ನು ಮರುನಿರೂಪಿಸಿದ ಕೌಶಲ್ಯವನ್ನು ಆ ಕತೆಯಲ್ಲಿ ಕಾಣಬಹುದು. ತಮ್ಮ ಊರಾದ ಕಿನ್ನಿಕಂಬಳದಲ್ಲಿ ಪಂಜೆ ಮಂಗೇಶರಾಯರು ಕೋಟಿಚೆನ್ನಯ ಕತೆ ಬರೆಯಲು ಪ್ರೇರಣೆ ಪಡೆದಿರುವುದು ಅಭಿಮಾನದ ಸಂಗತಿ ಎಂದು ಕೆ.ಪಿ.ರಾವ್ ಅವರು ಹೇಳಿದರು.

ಯಕ್ಷಗಾನಾಚಾರ್ಯ ತೋನ್ಸೆ ಕಾಂತಪ್ಪ ಮಾಸ್ತರ್ ಮತ್ತು ಯಕ್ಷಗಾನ ಕವಿವರ ಮಧು ಕುಮಾರ್ ನಿಸರ್ಗ ಅವರ ಬಗ್ಗೆ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅವರು ಸಂಸ್ಮರಣಾ ಮಾತುಗಳನ್ನಾಡಿದರು. ಮಧು ಕುಮಾರ್ ಶ್ರೇಷ್ಠ ಯಕ್ಷಗಾನ ಪ್ರಸಂಗಕರ್ತರಲ್ಲಿ ಒಬ್ಬರು. ತಮ್ಮ ಮನೆತನದ ಯಕ್ಷಗಾನ ಪರಂಪರೆಯನ್ನು ಮುಂದುವರಿಸಿದ ಕಲೋಪಾಸಕರಾಗಿದ್ದರು.

ತೋನ್ಸೆ ಕಾಂತಪ್ಪ ಮಾಸ್ತರ್ ಉಡುಪಿ ಮತ್ತು ಬ್ರಹ್ಮಾವರ ಪರಿಸರದಲ್ಲಿ ಯಕ್ಷಗಾನದ ಆಸಕ್ತಿಯನ್ನು ಪಸರಿಸಿದ ನಿಸ್ವಾರ್ಥ ಯಕ್ಷಗಾನ ಶಿಕ್ಷಕರು. ಈಗ ಸಾಧಕರಾಗಿರುವ ಅನೇಕರು ಅವರ ಶಿಷ್ಯರಾಗಿದ್ದರು ಎಂಬುದು ಸ್ಮರಣೀಯ ಸಂಗತಿ ಎಂದು ಡಾ. ಪ್ರಭಾಕರ ಜೋಶಿ ಅವರು ಹೇಳಿದರು.



ಹಿರಿಯ ಪಾಡ್ದನ ಪರಿಣಿತರಾದ ರುಕ್ಕು ಕರಿಯಂಗಳ ಅವರು ಕೋಟಿ ಚೆನ್ನಯ್ಯ ಪಾಡ್ದನವನ್ನು ಪ್ರಸ್ತುತಿಪಡಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು.
ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ ಕುಮಾರ್ ಸ್ವಾಗತಿಸಿದರು. ಕಲಾವಿದ ಸುನಿಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿದರು. ಸ್ಕಂದ ಕೊನ್ನಾರ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪೃಥ್ವಿರಾಜ ಕವತ್ತಾರು ನಿರ್ದೇಶನದಲ್ಲಿ ತುಳುತಿಟ್ಟಿನ ಪೂರ್ವರಂಗ ಸಹಿತ ‘ಕೋಟಿ ಚೆನ್ನಯ’ ಯಕ್ಷಗಾನ ಜರಗಿತು.

