ಸುಳ್ಯ: ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ವರದಿ ವರ್ಷದಲ್ಲಿ ₹2.64 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.16ರಷ್ಟು ಡಿವಿಡೆಂಡ್ ವಿತರಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಸಿ. ಸದಾನಂದ ತಿಳಿಸಿದರು
ಸುಳ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ 29ನೇ ವಾರ್ಷಿಕ ಮಹಾಸಭೆಯ ಹಿನ್ನೆಲೆಯಲ್ಲಿ ಸಂಘದ ಪ್ರಗತಿ ಹಾಗೂ ಸಾಧನೆಗಳ ವಿವರ ನೀಡಿದರು. ಮಹಾಸಭೆಯಲ್ಲಿ ಭಾಗವಹಿಸಿದ ಸದಸ್ಯರಿಗೆ ಉಡುಗೊರೆ ವಿತರಿಸಲಾ ಗಿದೆ ಎಂದರು.

1997ರಲ್ಲಿ ಗೌಡರ ಯುವ ಸೇವಾ ಸಂಘ (ರಿ.), ಸುಳ್ಯ ಇವರ ಪ್ರವರ್ತಕತ್ವದಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆರಂಭಗೊಂಡಿದ್ದು, ಆರಂಭದಲ್ಲಿ 435 ಸದಸ್ಯರನ್ನು ಹೊಂದಿತ್ತು. ಇದೀಗ ವಿವಿಧ ವರ್ಗಗಳಿಗೆ ಸೇರಿದ 23,134 ಸದಸ್ಯರನ್ನು ಹೊಂದಿದೆ. ಸದಸ್ಯರಿಂದ ₹5.30 ಕೋಟಿ ಪಾಲು ಬಂಡವಾಳ ಸಂಗ್ರಹಿಸಲಾಗಿದೆ.
ಸದಸ್ಯರ ಅನುಕೂಲಕ್ಕಾಗಿ ವಾಹನ ಸಾಲ, ಚಿನ್ನಾಭರಣ ಸಾಲ, ಈಡಿನ ಸಾಲ, ಭದ್ರತಾ ಸಾಲ, ವ್ಯಾಪಾರ ಸಾಲ ಹಾಗೂ ಜಾಮೀನು ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ ಇ-ಸ್ಟಾಂಪಿಂಗ್ ವಿತರಣೆ, ಆರ್‌ಟಿಜಿಎಸ್, ಎನ್‌ಇಎಫ್‌ಟಿ ಸೇರಿದಂತೆ ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ನೀಡಲಾಗುತ್ತಿದೆ.
ಸಂಸ್ಥೆಯ ಕಾರ್ಯವ್ಯಾಪ್ತಿ ರಾಜ್ಯಮಟ್ಟದಲ್ಲಿದ್ದು, ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ 24 ಶಾಖೆಗಳನ್ನು ಆರಂಭಿಸಿ ವ್ಯವಹಾರ ನಡೆಸುತ್ತಿದೆ. ವರದಿ ವರ್ಷದಲ್ಲಿ ಸಂಸ್ಥೆಯು ₹278.92 ಕೋಟಿ ಠೇವಣಿ ಹೊಂದಿದ್ದು, ₹260.77ಕೋಟಿ ಸಾಲವನ್ನು ಸದಸ್ಯರಿಗೆ ವಿತರಿಸಿದೆ. ಸಂಸ್ಥೆಯ ದುಡಿಯುವ ಬಂಡವಾಳ ₹310.31 ಕೋಟಿಯಾಗಿದ್ದು, ಒಟ್ಟು ₹1,582 ಕೋಟಿ ವಾರ್ಷಿಕ ವ್ಯವಹಾರ ನಡೆಸಿದೆ.
ವರದಿ ವರ್ಷದಲ್ಲಿ ₹2,64,15,821.66 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.16ರಷ್ಟು ಡಿವಿಡೆಂಡ್ ವಿತರಿಸಲಾಗುವುದು. ಸಂಸ್ಥೆಯಲ್ಲಿ ₹3,97,21,428.39 ಕ್ಷೇಮನಿಧಿ ಹಾಗೂ ₹9,23,44,189.78 ಇತರ ನಿಧಿ ಇದೆ. ಪ್ರಸ್ತುತ ₹4,60,39,326.32 ಮೌಲ್ಯದ ಚರಾಸ್ತಿ ಹಾಗೂ ₹2,40,93,469.32 ಮೌಲ್ಯದ ಸ್ಥಿರಾಸ್ತಿಯನ್ನು ಸಂಸ್ಥೆ ಹೊಂದಿದೆ.
ಸುಳ್ಯದಲ್ಲಿ ಸುಸಜ್ಜಿತ ಕಟ್ಟಡ
ಸುಳ್ಯದ ಮೊಗಾರ್ಪಣೆ ಯಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿ ಸಂಸ್ಥೆಗೆ ಸೇರಿದ 36.25 ಸೆಂಟ್ ಸ್ವಂತ ಜಾಗವಿದ್ದು, ಇಲ್ಲಿ ವಾಣಿಜ್ಯ ಮಳಿಗೆಗಳನ್ನು ಒಳಗೊಂಡ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ. ನೆಲ ಅಂತಸ್ತಿನಲ್ಲಿ ಸುಳ್ಯ ಶಾಖೆ ಕಾರ್ಯನಿರ್ವಹಿಸಲಿದ್ದು, ಮೊದಲ ಮಹಡಿಯಲ್ಲಿ ಆಡಳಿತ ಕಚೇರಿ, ಸಭಾಭವನ ಹಾಗೂ ಅತಿಥಿಗೃಹ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಇದೀಗ ಸುಮಾರು ₹1.47 ಕೋಟಿ ವೆಚ್ಚದಲ್ಲಿ ಎರಡನೇ ಮಹಡಿ ನಿರ್ಮಿಸಲಾಗುತ್ತಿದ್ದು, ಕೆಎಂಎಫ್ ಸೇರಿದಂತೆ ಇತರ ಸಂಸ್ಥೆಗಳು ಹಾಗೂ ಗ್ರಾಹಕರಿಗೆ ಬಾಡಿಗೆ ಆಧಾರದ ಮೇಲೆ ಸೌಲಭ್ಯ ಕಲ್ಪಿಸುವ ಯೋಜನೆ ಹೊಂದಲಾಗಿದೆ. ಕಟ್ಟಡದ ಕಾಮಗಾರಿಗಳು ಪ್ರಗತಿಯಲ್ಲಿವೆ.
ಸಂಘದ ಬಹುತೇಕ ಶಾಖೆಗಳಲ್ಲಿ ಇ-ಸ್ಟಾಂಪಿಂಗ್ ವಿತರಣೆ ಸೌಲಭ್ಯವಿದ್ದು, ಸುಳ್ಯ ಶಾಖೆಯಲ್ಲಿ ಸದಸ್ಯರಿಗಾಗಿ ಸೇಫ್ ಡೆಪಾಸಿಟ್ ಲಾಕರ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
35 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಶಿಕ್ಷಣ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡುತ್ತಿರುವ ಸಂಸ್ಥೆ, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದ ವಿವಿಧ ಶಾಖೆಗಳ ಸದಸ್ಯರ 35 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದೆ ಎಂದು ಸದಾನಂದ ತಿಳಿಸಿದರು.
ಸಂಘದ ಮುಂದಿನ 25ನೇ ಶಾಖೆಯನ್ನು ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಶೀಘ್ರದಲ್ಲೇ ಉದ್ಘಾಟಿಸಲಾಗುವುದು. ಜನರಲ್ಲಿ ಉಳಿತಾಯದ ಮನೋಭಾವ ಬೆಳೆಸುವುದು, ಕೃಷಿಕರು ಹಾಗೂ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಒದಗಿಸುವುದು ಮತ್ತು ಆರ್ಥಿಕವಾಗಿ ನೆರವಾಗುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಸಹಕಾರಿ ಬಂಧುಗಳು ಸಂಸ್ಥೆಯೊಂದಿಗೆ ಕೈಜೋಡಿಸಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ದಿನೇಶ್ ಮಾಡಪ್ಪ ಡಿ., ಸಂಘದ ಸದಸ್ಯರಾದ ಪಿ.ಸಿ. ಜಯರಾಮ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಪಿ.ಎಸ್. ಗಂಗಾಧರ, ಮೋಹನ್ ರಾಮ್ ಸುಳ್ಳಿ, ಲಕ್ಷ್ಮೀನಾರಾಯಣ ನಡ್ಕ, ದಾಮೋದರ ನಾರ್ಕೋಡ್, ಜಯಲಲಿತಾ ಕೆ.ಎಸ್., ನಲಿನಿ ಸೂರಯ್ಯ, ಶೈಲೇಶ್ ಅಂಬೆಕಲ್ಲು, ದೊಡ್ಡಣ್ಣ ಬರೆಮೇಲು, ಸದಾನಂದ ಮಾವಾಜಿ, ಪ್ರೇಮ ಕೆ.ಎಲ್., ಜ್ಞಾನೇಶ್ ಎನ್.ಎ. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ ಉಪಸ್ಥಿತರಿದ್ದರು.
ಮಹಾಸಭೆಯಲ್ಲಿ ಸಂಘದ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.


