ನಿಯಮಬಾಹಿರವಾಗಿ ವಜಾ ಮಾಡಿರುವುದನ್ನು ವಿರೋಧಿಸಿ, ಉದ್ಯೋಗ ಕಲ್ಪಿಸುವಂತೆ ಒತ್ತಾಯಿಸಿ ಸುರತ್ಕಲ್ ನ ಬಾಳ ಬಳಿ ಇರುವ ಎಚ್ ಪಿಸಿಎಲ್ ಘಟಕದ ಪ್ರಧಾನ ದ್ವಾರದ ಬಳಿ ಕಳೆದ ಎರಡು ತಿಂಗಳುಗಳಿಂದ ನಿರಂತರ ಧರಣಿ ನಡೆಸುತ್ತಿರುವ ನಾಲ್ಕು ಮಹಿಳಾ ಗುತ್ತಿಗೆ ಕಾರ್ಮಿಕರನ್ನು ಬೆಂಬಲಿಸಿ, ಉದ್ಯೋಗದ ಮರು ನೇಮಕಕ್ಕೆ ಒತ್ತಾಯಿಸಿ ಸಿಐಟಿಯು ದ.ಕ. ಜಿಲ್ಲಾ ಸಮಿತಿ ಹಾಗು ‘ನಾಗರಿಕ ಹೋರಾಟ ಸಮಿತಿ, ಸುರತ್ಕಲ್’ ಜಂಟಿಯಾಗಿ ಕಾಟಿಪಳ್ಳ, ಕೈಕಂಬ ಜಂಕ್ಷನ್ ನಿಂದ ಎಚ್ ಪಿಸಿಎಲ್ ಪ್ರಧಾನ ದ್ವಾರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಎಚ್ ಪಿಸಿಎಲ್ ಪ್ರಧಾನ ದ್ವಾರದ ಮುಂಭಾಗ ಪ್ರತಿಭಟನಾ ಸಭೆ ನಡೆಸಲಾಯಿತು

ಹಿರಿಯ ಕಾರ್ಮಿಕ ನಾಯಕ, ಸಿಐಟಿಯು ರಾಜ್ಯಾಧ್ಯಕ್ಷರಾದ ಕಾಮ್ರೇಡ್ ಮೀನಾಕ್ಷಿ ಸುಂದರಮ್ ರವರು ಗೇಟ್ ಮುಂಭಾಗ ಜರುಗಿದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ದೇಶದಲ್ಲಿ ಗುತ್ತಿಗೆ ಕಾರ್ಮಿಕರ ಪರಿಸ್ಥಿತಿ ತೀರಾ ಹೀನಾಯವಾಗಿದೆ. ಕಡಿಮೆ ವೇತನಕ್ಕೆ ದುಡಿಸುವುದಲ್ಲದೆ, ಯಾವುದೇ ಪೂರ್ವ ಸೂಚನೆ, ಪರಿಹಾರ ಇಲ್ಲದೆ ಕೆಲಸದಿಂದ ಹೊರದಬ್ಬಲಾಗುತ್ತಿದೆ. ಕಾರ್ಮಿಕರ ಉದ್ದಾರಕ್ಕೆ ಕಾನೂನು ತಂದಿದ್ದೇವೆ ಎಂದು ಸರಕಾರ ಕೊಚ್ಚಿಕೊಳ್ಳುತ್ತದೆ. ಆದರೆ, ಕಾನೂನು ಪಾಲಿಸದೆ ಗುತ್ತಿಗೆ ಕಾರ್ಮಿಕರನ್ನು ಬೀದಿಗೆ ತಳ್ಳಲಾಗುತ್ತಿದೆ. ಹೀಗೆ ಬೀದಿಗೆ ಬೀಳುತ್ತಿರುವ ಕಾರ್ಮಿಕರ ಅಹವಾಲು ಆಲಿಸಲು, ಕಾನೂನು ಅನ್ವಯಿಸಲು ಈ ಸರಕಾರಗಳಿಗೆ ಸಮಯ ಇಲ್ಲ, ಇದಕ್ಕೆ ಸುರತ್ಕಲ್ ನಲ್ಲಿ ಕೇಂದ್ರ ಸಾರ್ವಜನಿಕ ರಂಗದ ಉದ್ಯಮ ಎಚ್ ಪಿಸಿಎಲ್ ಯಾವುದೇ ನಿಯಮ ಪಾಲಿಸದೆ ಮಹಿಳಾ ಗುತ್ತಿಗೆ ಕಾರ್ಮಿಕರನ್ನು ಹೊರದಬ್ಬಿರುವುದು ತಾಜಾ ಉದಾಹರಣೆ ಎಂದು ಕಿಡಿಕಾರಿದರು.ಸಿಐಟಿಯು ಕಾರ್ಮಿಕ ವರ್ಗದ ನೈಜ ಪ್ರತಿನಿಧಿಯಾಗಿದ್ದು, ಎಚ್ ಪಿಸಿಎಲ್ ಅನ್ಯಾಯವಾಗಿ ಹೊರದಬ್ಬಿರುವ ಮಹಿಳಾ ಕಾರ್ಮಿಕರಿಗೆ ನ್ಯಾಯ ದೊರಕುವವರೆಗೂ ದೃಢವಾಗಿ ನಿಲ್ಲಲಿದೆ ಎಂದು ಹೇಳಿದರು.

ನಾಗರಿಕ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡುತ್ತಾ, ಎಚ್ ಪಿಸಿಎಲ್, ಎಮ್ಆರ್ ಪಿಎಲ್ ಸಹಿತ ಸುರತ್ಕಲ್ ವಲಯದ ದೊಡ್ಡ ಉದ್ಯಮಗಳು ಗುತ್ತಿಗೆ ಕಾರ್ಮಿಕರ ಶೋಷಣೆಯಲ್ಲಿ ಮುಂಚೂಣಿಯಲ್ಲಿವೆ. ನಮ್ಮದೇ ನೆಲದಲ್ಲಿ ಉದ್ಯಮ ಕಟ್ಟಿರುವ ಎಚ್ ಪಿಸಿಎಲ್ ನಲ್ಲಿ ಹೊರ ರಾಜ್ಯದ ಅಧಿಕಾರಿಗಳು ತುಂಬಿಕೊಂಡಿದ್ದರು, ಸ್ಥಳೀಯರನ್ನು ನಿಕೃಷ್ಟವಾಗಿ ಕಾಣುತ್ತಾರೆ. ಗುತ್ತಿಗೆ ಕಾರ್ಮಿಕರು ಜೀತದಾಳುಗಳಂತೆ ದುಡಿಯುವ ಸ್ಥಿತಿ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು. ಎಚ್ ಪಿಸಿಎಲ್ ಗೇಟ್ ಮುಂಭಾಗ ಕೆಲಸ ಕಳೆದು ಕೊಂಡಿರುವ ಬಡಪಾಯಿ ಹೆಣ್ಣು ಮಕ್ಕಳು ಕಳೆದ ಎರಡು ತಿಂಗಳಿನಿಂದ ಧರಣಿ ನಡೆಸಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದರೂ ಜಿಲ್ಲಾಡಳಿತದ ಯಾವುದೇ ಅಧಿಕಾರಿಗಳು, ಸ್ಥಳೀಯ ಸಂಸದ, ಶಾಸಕರುಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶುಕ್ರವಾರದಂದು ಕೇಂದ್ರ ಕಾರ್ಮಿಕ ಇಲಾಖೆ ಅಧಿಕಾರಿಗಳು ಸಭೆ ಕರೆದಿದ್ದು, ಅಲ್ಲಿ ವಿಷಯ ಇತ್ಯರ್ಥ ಆಗದಿದ್ದಲ್ಲಿ ಹೋರಾಟವನ್ನು ತೀವ್ರ ಸ್ವರೂಪಕ್ಕೆ ಕೊಂಡೊಯ್ಯುವುದಾಗಿ ಎಚ್ಚರಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಬಿ ಎಮ್ ಭಟ್, ಪ್ರಮುಖರಾದ ಬಿ ಕೆ ಇಮ್ತಿಯಾಜ್ ಮಾತನಾಡಿದರು.ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಕೆ ಯಾದವ ಶೆಟ್ಟಿ,ಕೃಷ್ಣಪ್ಪ ಸಾಲ್ಯಾನ್, ಸದಾಶಿವ ದಾಸ್, ದ.ಕ. ಜಿಲ್ಲಾ ಬೀಡಿ ಫೆಡರೇಷನ್ ನ ಜೆ ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಜಯಂತಿ ಬಿ ಶೆಟ್ಟಿ, ರಮಣಿ ಮೂಡುಬಿದಿರೆ,ಲಕ್ಷ್ಮಿ ಮೂಡಬಿದ್ರೆ,ಲೋಲಾಕ್ಷಿ,ಸುಂದರ ಕುಂಪಲ,ಜಯಶ್ರೀ ಬೆಳ್ತಂಗಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು,ಜಯಂತ ನಾಯಕ್, ರವಿಚಂದ್ರ ಕೊಂಚಾಡಿ,ವಸಂತಿ ಕುಪ್ಪೆಪದವು,ರಾಧಾ ಮೂಡುಬಿದಿರೆ,ಗಿರಿಜಾ, ಡಿವೈಎಫ್ಐ ನ ರಿಜ್ವಾನ್ ಹರೇಕಳ, ತಯ್ಯೂಬ್ ಬೆಂಗ್ರೆ,ನವೀನ್ ಕೊಂಚಾಡಿ,ದಲಿತ ಸಂಘಟನೆಯ ಕೃಷ್ಣ ತಣ್ಣೀರುವಾವಿ,ಆದಿವಾಸಿ ಸಂಘಟನೆಯ ಕೃಷ್ಣ ಇನ್ನಾ, ಜನವಾದಿ ಮಹಿಳಾ ಸಂಘದ ಕಿರಣಪ್ರಭಾ, ಪ್ರಮೀಳಾ ಶಕ್ತಿನಗರ, ಆಶಾ ಬೋಳೂರು, ಅಸುಂತಾ, ಹೋರಾಟ ಸಮಿತಿಯ ಸಲೀಮ್ ಕಾಟಿಪಳ್ಳ, ಸಮದ್ ಕಾಟಿಪಳ್ಳ,ಬಿ ಕೆ ಮಕ್ಸೂದ್,ಅಜ್ಮಲ್ ಸುರತ್ಕಲ್, ಸಿಲ್ವಿಯಾ ಜೋಕಟ್ಟೆ, ಗಂಗಾಧರ ಬಂಜನ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀನಾಥ್ ಕುಲಾಲ್ ವಂದನಾರ್ಪಣೆಗೈದರು.

