ಉಡುಪಿ: ಬಂಟಕಲ್ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಕನ್ನಡ ಭಾಷೆಯ ಹಿರಿಮೆ ಹಾಗೂ ನಾಡಿನ ಭಾಷಾಭಿಮಾನವನ್ನು ಬಿಂಬಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಅವರು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯೊಂದಿಗೆ ಕನ್ನಡ ಭಾಷೆಯನ್ನೂ ಹೆಚ್ಚಾಗಿ ಬಳಸಬೇಕು. ಕನ್ನಡವು ಜನರು ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಸುಂದರವಾದ ಭಾಷೆಯಾಗಿದ್ದು, ಅದರ ಬಳಕೆಯನ್ನು ಹೆಚ್ಚಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಸಂಶೋಧನಾ ಡೀನ್ ಡಾ. ಸಚಿನ್ ಭಟ್ ಅವರು ಕನ್ನಡ ಭಾಷೆಯ ಇತಿಹಾಸ ಹಾಗೂ ಅದರ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ಕಲಿಕಾ ವಿಭಾಗದ ಪ್ರಾಧ್ಯಾಪಕ ಬಾಲಚಂದ್ರ, ಗಣಕಯಂತ್ರ ವಿಭಾಗದ ವಿದ್ಯಾರ್ಥಿನಿ ಶ್ರೀಧನ್ಯ ಹಾಗೂ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕಾ ವಿಭಾಗದ ವಿದ್ಯಾರ್ಥಿ ವಿಶ್ವೇಶ್ ಪಿ. ರಾವ್ ಅವರು ಕರ್ನಾಟಕ ರಾಜ್ಯೋತ್ಸವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.


