ಕನ್ಯಾನ ಸದಾಶಿವ ಶೆಟ್ಟಿ – ಐಕಳ ಹರೀಶ್ ಶೆಟ್ಟಿ ವಿವಾದಕ್ಕೆ ತೆರೆ: ಸಮಾಜದ ಉನ್ನತಿಗೆ, ಒಗ್ಗಟ್ಟಿನ ಬದ್ಧತೆಗೆ ನಿರ್ಧಾರ
ಮುಂಬಯಿ,- ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಹಾಗೂ ಸಮಾಜದ ಮುಂಚೂಣಿ ಮಹಾ ದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರ ನಡುವಿನ ಬಿನ್ನಾಭಿಪ್ರಾಯಗಳು ಇಂದು ಸುಖಾಂತ್ಯಗೊಂಡಿದ್ದು, ಸಮುದಾಯದ ಏಳಿಗೆಯ ದೃಷ್ಟಿಯಿಂದ ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ.
ಫೆಬ್ರವರಿ 26ರಂದು ಕಾಂದಿವಲಿ ಪೂರ್ವದ ಠಾಕೂರ್ ವಿಲೇಜ್‌ನಲ್ಲಿ ‘ಸೋರಾ ಬೈ ನೈನ್’ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಮಾಜಿ ಸಂಸದ ಗೋಪಾಲ್ ಸಿ. ಶೆಟ್ಟಿ ಸಮಕ್ಷಮದಲ್ಲಿ ನಡೆದ ಸಂಧಾನ ಸಭೆಯಲ್ಲಿ ಐಕಳ ಹರೀಶ್ ಶೆಟ್ಟಿ ಹಾಗೂ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಮಾರ್ಗದರ್ಶನದ ಮಾತುಗಳನ್ನಾಡುತ್ತಾ, ಸಮಾಜಕ್ಕೆ ಸೇವೆಯನ್ನು ಮಾಡುತ್ತಾ ಬಂದವರು ನೀವು ನಿಮ್ಮ ಸೇವೆ ಸಮಾಜಕ್ಕೆ ಇನ್ನಷ್ಟು ಅಗತ್ಯವಾಗಿದೆ. ಮನಸ್ಸಿನಲ್ಲಿರು ಯಾವುದೇ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಸಮಾಜದ ಒಗ್ಗಟ್ಟಿಗೆ ಮತ್ತು ಅಭಿವೃದ್ಧಿಗೆ ಪೂರಕವಾಗುವ ಕಾರ್ಯ ನಿರಂತರ ಮಾಡುತ್ತಿರಿ ಎಂದು ಹಾರೈಸಿದರು.
ಶಶಿಧರ್ ಶೆಟ್ಟಿ ಬರೋಡ, ಮಹೇಶ್ ಶೆಟ್ಟಿ ತೆಳ್ಳಾರ್, ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಈ ಮಹತ್ವದ ಸಂಧಾನ ಪ್ರಕ್ರಿಯೆ ನಡೆಯಿತು. ಸಮಾಜದ ಹಿತಾಸಕ್ತಿಯೇ ಸರ್ವೋಚ್ಚ ಎಂಬ ಉದಾತ್ತ ಉದ್ದೇಶದಿಂದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ ಇಬ್ಬರೂ ತಮ್ಮ ವೈಮನಸ್ಸುಗಳನ್ನು ಮರೆತು, ಕೈಜೋಡಿಸಿ ಮುನ್ನಡೆಯುವ ದೃಢ ನಿರ್ಧಾರ ಕೈಗೊಂಡರು.
ಈ ಐಕ್ಯತೆಯು ಬಂಟ ಸಮುದಾಯದ ಶಕ್ತಿ ಮತ್ತು ಸಾಂಘಿಕ ಚೈತನ್ಯವನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಐಕಳ ಹರೀಶ್ ಶೆಟ್ಟಿಯವರು ಕನ್ಯಾನ ಸದಾಶಿವ ಶೆಟ್ಟಿಯವರಲ್ಲಿ ಕ್ಷಮೆಯಾಚಿಸಿ ನನ್ನಲ್ಲಿ ಅಥವಾ ಒಕ್ಕೂಟದಲ್ಲಿ ಯಾವುದೇ ರೀತಿಯ ಮನಸ್ತಾಪವಿದ್ದರೆ ಕ್ಷಮೆ ಇರಲಿ, ನಮ್ಮ ನಿಮ್ಮೊಳಗೆ ಮಾತಿನ ಮೂಲಕ ಯಾವುದೇ ರೀತಿಯ ಭಿನ್ನಾಭಿಪ್ರಾಯ ಮುಂದೆ ಬಾರದೆ ಇರಲಿ ಎಂದು ಒಬ್ಬರನ್ನೊಬ್ಬರು ತಬ್ಬಿಕೊಂಡ ಬಳಿಕ ಹೂಗುಚ್ಛ ನೀಡಿ ಹೃತ್ತೂರ್ವಕವಾಗಿ ವಿವಾದಕ್ಕೆ ತೆರೆ ಎಳೆದರು.

ಸಂಧಾನ ಸಭೆಯಲ್ಲಿ ಮಾಜಿ ಸಂಸದರಾದ ಗೋಪಾಲ್ ಶೆಟ್ಟಿ, ಸಮಾಜದ ಗಣ್ಯರಾದ ಬರೋಡ ಶಶಿಧರ ಶೆಟ್ಟಿ, ಮಹೇಶ್ ಶೆಟ್ಟಿ ತೆಳ್ಳಾರ್, ರಾಜೇಶ್ಶೆಟ್ಟಿ ರಾಕ್ಷಿ ಬಿಲ್ಡರ್ಸ್, ಪಟ್ಲ ಸತೀಶ್ ಶೆಟ್ಟಿ, ಕೆ. ಕೆ. ಶೆಟ್ಟಿ ಅಹ್ಮದ್‌ನಗರ, ಗಿರೀಶ್ ಶೆಟ್ಟಿ ತೆಳ್ಳಾರ್, ಶಶಿಧರ ಶೆಟ್ಟಿ ಇನ್ನಂಜೆ, ಉಳ್ಳೂರು ಮೋಹನದಾಸ ಶೆಟ್ಟಿ, ಅಶೋಕ್ ಶೆಟ್ಟಿ ಬೆಳ್ಳಾಡಿ, ಅರವಿಂದ್ ಆನಂದ್ ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ ಕಲ್ಪವೃಕ್ಷ ಇವರುಗಳ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಿ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಐಕಳ ಹರೀಶ್ ಶೆಟ್ಟಿಯವರ ನಡುವಿನ ಮನಸ್ತಾಪವನ್ನು ಸುಖಾಂತ್ಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಶಶಿಧರ ಶೆಟ್ಟಿ ಬರೋಡ ಅವರು ಫೋನ್ ಮೂಲಕ ಐಕಳ ಹಾಗೂ ಅಶೋಕ್ ಪಕ್ಕಳರ ನಡುವೆ ರಾಜಿ ಮಾತುಕತೆಯನ್ನು ನಡೆಸಿ ಅವರಿಬ್ಬರ ನಡುವೆ ನಡೆದ ಪ್ರಕರಣವನ್ನು ಕೂಡ ಇದೇ ವೇಳೆ ಮುಕ್ತಾಯಗೊಳಿಸಿದರು.
ವೈಯಕ್ತಿಕ ಘನತೆಗಿಂತ ಸಮಾಜದ ಒಗ್ಗಟ್ಟು ಮುಖ್ಯ: ಐಕಳ ಹರೀಶ್ ಶೆಟ್ಟಿ
ಐಕಳ ಹರೀಶ್ ಶೆಟ್ಟಿಯವರು ಇದೇ ವೇಳೆ ತನ್ನ ಅಭಿಪ್ರಾಯವನ್ನು ತಿಳಿಸುತ್ತಾ ‘ಸದಾಶಿವ ಶೆಟ್ಟಿ ಅವರು ಒಕ್ಕೂಟದ ಮಹಾದಾನಿ, ಸಮಾಜದ ಉನ್ನತಿಗೆ ಅವರು ಕಾರಣಕರ್ತರಾಗಿ ಸಮಾಜದ ಕಟ್ಟಕಡೆಯ ಜನರಿಗೆ ಸಹಾಯ ಆಗುವ ಉದ್ದೇಶ ದಿಂದ ನಮಗೆ ಶಕ್ತಿಯಾಗಿ ಸಹಕಾರ ನೀಡುತ್ತಾ ಬಂದಿದ್ದಾರೆ. ಇಂದು ನಾವೆಲ್ಲ ಸಮಾಜದ ಗಣ್ಯ ವ್ಯಕ್ತಿಗಳು ಒಟ್ಟಿಗೆ ಸೇರಿದ್ದೇವೆ ನಮ್ಮ ಮಹಾದಾನಿ ಸದಾಶಿವ ಶೆಟ್ಟಿ ಅವರ ಮನಸಿಗೆ ಬೇಸರ ಆಗಿ ಸಮಾಜ ಸೇವೆ ಬೇಡ ಎಂದು ತೀರ್ಮಾನಕ್ಕೆ ಬಂದಿದ್ದರು. ಸಮಾಜಕ್ಕೆ ಇಷ್ಟು ಪ್ರೀತಿ ಕೊಟ್ಟ ವ್ಯಕ್ತಿಯ ಮನಸ್ಸಿಗೆ ನೋವಾಗಿದೆ ಎಂದು ತಿಳಿದ ಬಳಿಕ ನಾನು ಕೂಡ ಸಮಾಜ ಸೇವೆಗೆ ತಿಲಾಂಜಲಿ ಹೇಳುವ ಆಲೋಚನೆ ಮಾಡಿದ್ದೆ. ನಾನು ಯಾವುದೇ ಸಮಾಜ ಸೇವೆ ಮಾಡಿದ್ದರೂ, ಅದು ದಾನಿಗಳ ಸಹಾಯದಿಂದ ಎಂದು ನಾನು ಯಾವತ್ತೂ ಹೇಳುತ್ತೇನೆ,
ದಾನಿಗಳೇ ದೇವರು ಎಂದು. ಸದಾಶಿವ ಶೆಟ್ಟಿ ನನಗಿಂತ ಹಿರಿಯರು, ಗೌರವಾನ್ವಿ, ತರು ಅವರ ಮನಸ್ಸಿಗೆ ನೋವಾಯಿತು ಎಂದು ತಿಳಿದು ನನಗೆ ಬಹಳ ದುಃಖವಾಯಿತು. ಎಲ್ಲರ ಎದುರಿನಲ್ಲೇ ಕ್ಷಮೆ ಯಾಚಿಸಿದ್ದೇನೆ, ನನಗೆ ಅವರ ಬಳಿ ವೈಯಕ್ತಿಕ ದ್ವೇಷ ಇಲ್ಲ ವ್ಯಕ್ತಿಗಿಂತ ಸಂಸ್ಥೆ ದೊಡ್ಡದು ಎಂದು ನಾವಿಬ್ಬರು ತಿಳಿದವರು. ಯಾರೇ ಅಗಲಿ ಯಾವುದೇ ಹುದ್ದೆ ಶಾಶ್ವತ ಅಲ್ಲ. ನನ್ನ ಕಾರ್ಯಾವಧಿ ಮುಗಿದ ಕೂಡಲೇ ಚುನಾವಣೆ ಘೋಷಣೆ ಆಯಿತು. ಆದರೆ ಆಗ ಯಾರೂ ಸ್ಪರ್ಧಿಸಲು ಮುಂದೆ ಬಾರದ ಕಾರಣ ನಾವೇ ಮುಂದುವರಿದೆವು. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಎಲ್ಲ ಸಮಾಜಕ್ಕೂ ಮಾದರಿಯಾಗಿದೆ. ನಾವು ಎಲ್ಲಾ ರಂಗದಲ್ಲಿಯೂ ಬಲಿಷ್ಠರಾಗಿ ಕೆಲಸ ಮಾಡುತ್ತಿದ್ದೇವೆ. ಸದಾಶಿವ ಶೆಟ್ಟಿಯವರು ಮಾಡಿದ ಸಮಾಜ ಸೇವೆ ಯಾವ ಬಂಟರೂ ಮರೆಯುವಂತಿಲ್ಲ. ಅವರ ಹೆಸರು ಸಮಾಜದಲ್ಲಿ ಸ್ಥಿರವಾಗಿ ಉಳಿಯುತ್ತದೆ. ದೇವರ ದಯದಿಂದ ನಮ್ಮ ಎಲ್ಲ ಬಿನ್ನಾಭಿಪ್ರಾಯಗಳನ್ನು ಮರೆತು ಈಗ ನಾವು ಒಟ್ಟಾಗಿದ್ದೇವೆ. ಮನುಷ್ಯನ ಜೀವನ ಮೂರು ದಿನದ್ದು, ನಾವು ಬಿಟ್ಟು ಹೋಗುವುದು ನಮ್ಮ ಒಳ್ಳೆಯತನ ಮಾತ್ರ. ನನ್ನಿಂದ ತಪ್ಪಾಗಿದ್ದರೆ ಸಮಾಜಗೋಸ್ಕರ ಎಲ್ಲಾ ಬಂಟರಲ್ಲಿ ಕ್ಷಮೆ ಕೇಳುತ್ತೇನೆ. ದೇವರು ಸದಾಶಿವ ಶೆಟ್ಟಿ ಅವರಿಗೆ ಆಯುರಾರೋಗ್ಯ, ಸಂಪತ್ತು ಕೊಟ್ಟು ಅವರಿಂದ ಮತ್ತಷ್ಟು ಸಮಾಜಸೇವೆ ಆಗುವಂತಾಗಲಿ. ನನ್ನ ಹೆಗಲ ಮೇಲಿರುವ ಒಕ್ಕೂಟದ ಆಶ್ರಯದಲ್ಲಿ ನಿರ್ಮಾಣವಾಗುತ್ತಿರುವ ಸದಾಶಿವ ಶೆಟ್ಟಿ ಕನ್ಯಾನ ಸಂಕಿರಣ ಡಿಸೆಂಬರ್ ಕೊನೆಯಲ್ಲಿ ಲೋಕರ್ಪಣೆಗೊಳ್ಳುವಲ್ಲಿ ನಾವೆಲ್ಲರೂ ಒಗ್ಗಟ್ಟಿನಲ್ಲಿ ಶ್ರಮಿಸೋಣ ಎಂದರು.
ಸಮಾಜದ ಏಳಿಗೆ, ಒಗ್ಗಟ್ಟು ನನ್ನ ಗುರಿ: ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ
ಈ ಸಂದರ್ಭದಲ್ಲಿ ಮಾತನಾಡಿದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಅವರು ”ನಾವೆಲ್ಲರೂ ಸಮಾಜಕ್ಕಾಗಿ ದುಡಿಯುವುದು ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಸಮಾಜದ ಏಳಿಗೆಗೋಸ್ಕರ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಂದೆ ಒಗ್ಗಟ್ಟಿನಿಂದ ಪಾರದರ್ಶಕ ವಾಗಿ ಸಮಾಜವನ್ನು ಮುನ್ನಡೆಸೋಣ. ಹಲವಾರು ವರ್ಷಗಳಿಂದ ನಾನು ಮತ್ತು ಐಕಳ ಹರೀಶ್ ಶೆಟ್ಟಿ ಅವರು ಒಂದಾಗಿ ಕೆಲಸ ಮಾಡುತ್ತಿದ್ದೇವೆ; ಅವರು ಸಂಘಟನಾ ಚತುರರಾಗಿ ಕೆಲಸ ಮಾಡಿದರೆ ನಾನು ನನ್ನಿಂದಾಗುವ ದಾನ ನೀಡಿ ಸಹಕಾರ ನೀಡಿದ್ದೇನೆ. ಕಳೆದ ಹಲವು ದಿನಗಳಿಂದ ನನ್ನೊಂದಿಗೆ ಇದ್ದ ಹಿತೈಷಿಗಳು ಅಭಿಮಾನಿಗಳು ಸಮಾಜದ ಒಗ್ಗಟ್ಟಿಗಾಗಿ ಎಲ್ಲರೂ ಮತಭೇದ ಮರೆತು ಒಗ್ಗಟ್ಟಿನಿಂದ ಸಮಾಜ ಸೇವೆ ಮಾಡುವಂತೆ ವಿನಂತಿಸಿ ಕೊಂಡರು.
ಸಮಾಜದ ಗಣ್ಯ ವ್ಯಕ್ತಿಗಳ ನಿರ್ದೇಶನದಂತೆ ಮತ್ತೆ ಒಗ್ಗಟ್ಟು : ಶಶಿಧರ ಶೆಟ್ಟಿ ಬರೋಡ
ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಮತ್ತು ಐಕಳ ಹರೀಶ್ ಶೆಟ್ಟಿಯವರ ಸಂಧಾನದ ಸಾರಥ್ಯವನ್ನು ವಹಿಸಿದ ಬರೋಡದ ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅವರು ಕರ್ನಾಟಕ ಮಲ್ಲದ ಪ್ರತಿನಿಧಿಯೊಂದಿಗೆ ಮಾತನಾಡಿ, ಸಮಾಜದ ಪ್ರಗತಿಗೆ ಸದಾಶಿವ ಶೆಟ್ಟಿ ಅವರಂತಹ ದಾನ ನೀಡುವ ಸಮಾಜ ಚಿಂತಕರು ಕಡಿಮೆ, ಇಂಥ ಸಂದರ್ಭದಲ್ಲಿ ಸಮಾಜದ ಅಭಿವೃದ್ಧಿಗೆ ದಾನ ನೀಡುವವರನ್ನು ಒಟ್ಟಿಗೆ ಕೊಂಡು ಹೋಗುವುದು ಮುಖ್ಯವಾಗಿದೆ. ಹಾಗೆಯೇ ಸಮಾಜ ಸೇವೆಗೆ ಬದುಕನ್ನು ಸಮರ್ಪಿಸಿದ ಐಕಳ ಹರೀಶ್ ಶೆಟ್ಟಿ ಕೂಡ ಸಮಾಜಕ್ಕೆ ಅಗತ್ಯವಿದ್ದಾರೆ. ಇಬ್ಬರಲ್ಲಿ ಸಣ್ಣ ವಿಷಯದಿಂದ ಪ್ರಾರಂಭಗೊಂಡ ಭಿನ್ನಾಭಿಪ್ರಾಯ ಅದು. ಇಂದು ಸಮಾಜದ ಪ್ರತಿಷ್ಠಿತ ಉದ್ಯಮಿಗಳಾದ ಬಂಜಾರ ಪ್ರಕಾಶ್ ಶೆಟ್ಟಿ, ಸಾಯಿ ಪ್ಯಾಲೇಸ್ ರವಿ ಸುಂದರ್ ಶೆಟ್ಟಿ, ಕೆ. ಎಮ್. ಶೆಟ್ಟಿ, ಕೆ.ಡಿ. ಶೆಟ್ಟಿ, ಪ್ರವೀಣ್ ಭೋಜ ಶೆಟ್ಟಿ, ಉದಯ್ ಶೆಟ್ಟಿ ಮುನಿಯಾಳ್ ಅವರ ಮುನ್ಸೂಚನೆಯಂತೆ ಸುಖಾಂತ್ಯ ಕಂಡಿದೆ. ಬಂಟರ ಸಮಾಜ ಎಲ್ಲಾ ಸಮಾಜಕ್ಕೂ ಆದರ್ಶವಾಗಿದೆ. ದಾನ, ಧರ್ಮ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಮಾತುಗಳಿಂದ ಮನಸ್ಸಿಗೆ ನೋವಾಗುವುದು ಸಹಜ ಅದು ವೈರತ್ವ ಅವಾಗಬಾರದು, ಸಮಾಜ ಬಂಧುಗಳ ಎಲ್ಲರ ಆಶ್ರಯದಂತೆ ಇಬ್ಬರ ಮನಸ್ತಾಪ ಸಮಾಜದ ಒಳಿತಿಗಾಗಿ ಪ್ರಕರಣ ಕೊನೆಗೊಂಡಿದೆ. ಮುಂದಿನ ದಿನಗಳಲ್ಲಿ ಭಿನ್ನಾಪ್ರಾಯವಿರುವ ಬಂಟ ಬಂಧುಗಳನ್ನು ಇದೇ ರೀತಿ ಸೇರಿಸಿ ಮಾತುಕತೆ ಮಾಡುವಂತೆ ಮಾಜಿ ಸಂಸದ ಗೋಪಾಲ್ ಶೆಟ್ಟಿ ಅವರ ಬಳಿ ಕೇಳಿಕೊಂಡಿದ್ದೇವೆ. ಡಿಸೆಂಬರ್ ಕೊನೆಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮುಲ್ಕಿಯಲ್ಲಿರುವ ಕನ್ಯಾನ ಸದಾಶಿವ ಶೆಟ್ಟಿ ಸಭಾಭವನ ಲೋಕರ್ಪಣೆಗೊಳ್ಳಲಿದೆ ಎಂದರು..
ಸಮಾಜಕ್ಕೆ ಒಳಿತಾಗುವುದೇ ನಮ್ಮ ಉದ್ದೇಶ: ಮಹೇಶ್ ಶೆಟ್ಟಿ ತೆಳ್ಳಾರ್
ಐಕಳ ಹರೀಶ್ ಶೆಟ್ಟಿ ಮತ್ತು ಕನ್ಯಾನ ಸದಾಶಿವ ಶೆಟ್ಟಿ ಅವರು ಸಮಾಜದಲ್ಲಿ ಒಗ್ಗಟ್ಟಾಗಿ ಮುನ್ನಡೆಯುವ ನಿರ್ಧಾರ ಬಹಳ ಸಂತೋಷ ನೀಡಿದೆ. ಇದು ನಮ್ಮ ಉದ್ದೇಶವೂ ಆಗಿತ್ತು. ಇವರಿಬ್ಬರೂ ಬಂಟ ಸಮಾಜಕ್ಕಲ್ಲದೆ ಎಲ್ಲಾ ಸಮಾಜಕ್ಕೂ ಅಗತ್ಯವಾಗಿದ್ದವರು. ಕೆಲವು ದಿನಗಳಿಂದ ನಡೆಯುತ್ತಿರುವ ಇವರಿಬ್ಬರ ನಡುವಿನ ವಿವಾದಗಳ ವಿದ್ಯಮಾನಗಳ ಕುರಿತು ಸಾಮಾನ್ಯ ಜನ ಕೂಡ ಮಾತನಾಡುತ್ತಿರುವುದು ನಮಗೆ ಬಹಳಷ್ಟು ದುಃಖ ತಂದಿದೆ. ಅದಕ್ಕಾಗಿ ಇಬ್ಬರು ಸಮಾಜದಲ್ಲಿ ಒಟ್ಟಾಗಿ ಸೇವೆ ಮಾಡುವುದು ಅಗತ್ಯವಾಗಿದೆ. ಅವರಿಬ್ಬರ ಭಿನ್ನಾಭಿಪ್ರಾಯ ದೂರವಾಗಿದೆ. ಎಲ್ಲಾ ಸಂಘ ಸಂಸ್ಥೆಗಳು ಒಗ್ಗಟ್ಟಿನಿಂದ ತಮ್ಮ ಜಾತೀಯ ಸಂಘಟನೆಗಳನ್ನು ಬಲಿಷ್ಠಗೊಳಿಸಬೇಕು, ಆ ಮೂಲಕ ಹಿಂದೂ ಸಮಾಜ ಬಲಿಷ್ಠವಾಗಲು ಸಾಧ್ಯ. ಸಮಾಜದ ಸೇವೆ ಮಾಡುವಾಗ ಟೀಕೆಗಳು ಬರುವುದು ಸಾಮಾನ್ಯ, ಅದೆಲ್ಲವನ್ನೂ ಮನಸ್ಸಿನಲ್ಲಿ ರಿಸದೆ ಸಂಘದ ಮತ್ತು ಸಮಾಜದ ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ತೊಡಗಿಕೊಳ್ಳಬೇಕು ಎಂದು ಸಂಧಾನ ಮಾಡುವಲ್ಲಿ ಪ್ರಮುಖರೆನಿಸಿಕೊಂಡಿರುವ ಹಿಂದೂ ಪ್ರಖರವಾದಿ ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರ್ ನುಡಿದರು.
ಇಬ್ಬರು ಒಗ್ಗಟ್ಟಾಗಿರುವುದು ಸಂತೋಷ ತಂದಿದೆ: ಪಟ್ಲ ಸತೀಶ್ ಶೆಟ್ಟಿ
ಸಮಾಜದ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಐಕಳ ಹರೀಶ್ ಶೆಟ್ಟಿ ಮತ್ತು ಸದಾಶಿವ ಶೆಟ್ಟಿ ಕನ್ಯಾನ ಅವರು ಭಿನ್ನಾಭಿಪ್ರಾಯಗಳು ಮರೆತು ಸಮಾಜದ ಒಳಿತಿಗಾಗಿ ಒಗ್ಗಟ್ಟಾಗಿ ಮುನ್ನಡೆಯುವುದು ಸಮಾಜಕ್ಕೆ ಸಂತಸ ತಂದಿದೆ. ಇದಕ್ಕೆ ಸಮಾಜದ ಗಣ್ಯರು ಸೇರಿಕೊಂಡಿರುವುದು ಕೂಡ ಸಮಾಜದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದರು.
ಯುವ ಸಮುದಾಯಕ್ಕೆ ಉತ್ತಮ ಉತ್ತಮ ಸಂದೇಶ: ಗಿರೀಶ್ ಶೆಟ್ಟಿ ತೆಳ್ಳಾರ್ ,
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಯುವ ವಿಭಾಗದ ಕಾರ್ಯಾಧಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಅವರು ಮಾದ್ಯಮಗಳೊಂದಿಗೆ ಮಾತನಾಡಿ, ಸಮಾಜದಲ್ಲಿ ಭಿನ್ನಾಭಿಪ್ರಾಯವಿರುವ ಮಹಾನಾಯಕರನ್ನು ಒಂದುಗೂಡಿಸುವಲ್ಲಿ ಸಮಾಜದ ಗಣ್ಯವ್ಯಕ್ತಿಗಳು ಶ್ರಮಿಸಿರುವುದು ಒಳ್ಳೆಯ ಬೆಳವಣಿಗೆ. ಈ ಬೆಳವಣಿಗೆ ಯುವ ಸಮುದಾಯಕ್ಕೆ ಒಂದು ಉತ್ತಮ ಸಂದೇಶವಾಗಿದೆ. ಸಮಾಜದ ಪ್ರಗತಿಗೆ ಎಲ್ಲರೂ ಒಗ್ಗಟಿನಿಂದ ವೈಮನಸ್ಸುಗಳನ್ನು ಬಿಟ್ಟು ಮುನ್ನಡೆಯೋಣ ಎಂದರು.
ಒಕ್ಕೂಟದ ಲೆಕ್ಕಪತ್ರ ಪಾರದರ್ಶಕವಾಗಿದೆ: ಉಳ್ಳೂರು ಮೋಹನ್‌ದಾಸ್ ಶೆಟ್ಟಿ


















