ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆಯಲಿರುವ 5ನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ ಸಂಸ್ಕೃತಿ ಉತ್ಸವ–2026ಕ್ಕೆ ಸಂಬಂಧಿಸಿದಂತೆ ಮೇ 2, 2026ರಂದು ಕುಡಾಲುಮೆರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಅಂತಿಮ ರೂಪುರೇಷೆ ಸಭೆ ಜರುಗಿತು
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ಒಮಾನ್ ಘಟಕ) ಅಧ್ಯಕ್ಷ ಅಬೂಬಕ್ಕರ್ ರಾಯಲ್ ಬೊಳ್ಳಾರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಸಂಘದ ಸೇವಾ ಮನೋಭಾವ ಮತ್ತು ಕನ್ನಡ ಪತ್ರಕರ್ತರ ಗೌರವಕ್ಕಾಗಿ ಕೈಗೊಂಡಿರುವ ಈ ಕಾರ್ಯ ಶ್ಲಾಘನೀಯವೆಂದರು. ಗಡಿನಾಡ ಪ್ರದೇಶದಲ್ಲಿ ಕನ್ನಡ ಸಂಸ್ಕೃತಿಯನ್ನು ಜೀವಂತವಾಗಿಡುವ ಇಂತಹ ಉತ್ಸವಗಳು ಸಮಾಜಕ್ಕೆ ದಿಕ್ಕು ತೋರಿಸುತ್ತವೆ ಎಂದು ಹೇಳಿದರು. ಹಿರಿಯ ಸಾಧಕರನ್ನು ಗೌರವಿಸುವ ಈ ಪ್ರಯತ್ನ ಯುವ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಸಭೆಯಲ್ಲಿ ಜಿಪಂ ಸದಸ್ಯರೂ ಸ್ವಾಗತ ಸಮಿತಿ ಆಧ್ಯಕ್ಷರೂ ಆದ ಸೋಮಶೇಖರ ಜೆ.ಎಸ್. ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕ ಬಿ.ಎ. ಖಾದರ್ ಹಾಜಿ, ಪ್ರಧಾನ ಸಂಚಾಲಕ ಅಶೋಕ ಭಂಡಾರಿ, ಸಂಘದ ಗೌರವಾಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ, ಸ್ವಾಗತ ಸಮಿತಿ ಉಪಾಧ್ಯಕ್ಷ ಬಿ.ಎ. ಬಶೀರ್, ಸಂಚಾಲಕ ಮುಹಮ್ಮದಲಿ ಬಿ. ಕೆ , ಆಹಾರ ಸಮಿತಿ ಅಧ್ಯಕ್ಷೆ ಶಶಿಕಲಾ ರೈ, ನ್ಯಾಯವಾದಿ ಥೋಮಸ್ ಡಿ’ ಸೋಜಾ, ಸಾಂಸ್ಕೃತಿಕ ಸಮಿತಿ ಸಂಚಾಲಕ ಎಸ್.ಕೆ. ಬಾಲಕೃಷ್ಣ, ಗಂಗಾಧರ ಕೆ., ಅಚ್ಚುತ ಚೇವಾರ್, ಮುಹಮ್ಮದ್ ಕುಞ, ಪುಷ್ಪಾ ಕಮಲಾಕ್ಷ ಸೇರಿದಂತೆ ಹಲವರು ಮಾತನಾಡಿದರು.
ಸಭೆಯಲ್ಲಿ ಉತ್ಸವದ ಅಂತಿಮ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಿತು. ಅನೇಕರು ಭಾಗವಹಿಸಿ ಸಲಹೆ–ಸೂಚನೆಗಳನ್ನು ನೀಡಿದರು.
ಸಂಘದ ಅಧ್ಯಕ್ಷ ರವಿ ನಾಯ್ಕಾಪು ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಕಾಂತ್ ನೆಟ್ಟಣಿಗೆ ಧನ್ಯವಾದ ಅರ್ಪಿಸಿದರು. ಇದೇ ತಿಂಗಳ 16 ರಂದು ಕುಡಾಲುಮೆರ್ಕಳ ಅನುದಾನಿತ ಕಿ. ಪ್ರಾ ಶಾಲೆಯಲ್ಲಿ ದತ್ತಿನಿಧಿ ಪ್ರಶಸ್ತಿ ಸಮಾರಂಭ – ಸಂಸ್ಕೃತಿ ಉತ್ಸವ ನಡೆಯಲಿದ್ದು, ಸಚಿವಾದಿ ಗಣ್ಯ ವ್ಯಕ್ತಿಗಳು,ಕರ್ನಾಟಕದ ಹಿರಿಯ ಪತ್ರಕರ್ತರ ಸಹಿತ ವಿವಿಧ ವಲಯಗಳ ಪ್ರಮುಖರು ಭಾಗವಹಿಸುವರು. ಇಡೀ ದಿನ ನಡೆಯುವ ಉತ್ಸವದಲ್ಲಿ ಪ್ರಮುಖ ತಂಡಗಳ ಸಾಂಸ್ಕೃತಿಕ ಪ್ರದರ್ಶನ ಇರುವುದು.
