ಬೆಂಗಳೂರಿನ ಬಂಗಾರದ ಮಳಿಗೆಯೊಂದರ ಹಿಂಬಾಗದ ಗೋಡೆ ಕೊರೆದು ಚಿನ್ನ ದೋಚಿ ರಾಜಸ್ತಾನಕ್ಕೆ ಪರಾರಿಯಾಗಿದ್ದ ಮೂವರನ್ನು ಪೋಲೀಸರು ಬಂಧಿಸಿ, ಸ್ವರ್ಣ ಸಹಿತ ಎತ್ತಿ ತಂದಿದ್ದಾರೆ.
ಬೆಂಗಳೂರಿನ ಬಾಗಲಕುಂಟೆ ಪೋಲೀಸರ ಸಾಹಸದಿಂದ ಕನ್ನ ಕೊರೆದು ಓಡಿ ಹೋದವರು ಬಚಾವಾಗಲು ಸಾಧ್ಯವಾಗಲಿಲ್ಲ. ಮೂವರು ಆರೋಪಿಗಳನ್ನು ಬಂಧಿಸಿರುವುದಲ್ಲದೆ ಅವರು ಎಗರಿಸಿದ್ದ ೯೮.೩೯ ಲಕ್ಷ ರೂಪಾಯಿ ಮೌಲ್ಯದ ಕನಕವನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಬಂಗಾರವಲ್ಲದೆ ಬೆಳ್ಳಿ ಗಟ್ಟಿಗಳು ಸಹ ಸೇರಿವೆ.
ಯಶವಂತಪುರದ ಗೋಕುಲ ರಸ್ತೆಯ ನಿವಾಸಿಯೊಬ್ಬರು ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಆಭರಣ ಮಳಿಗೆ ನಡೆಸುತ್ತಿದ್ದರು. ಏಪ್ರಿಲ್ ೨೭ರಂದು ಅವರು ಯಥಾಪ್ರಕಾರ ಆಭರಣಗಳನ್ನು ಶೋಕೇಸ್ಗಳಲ್ಲಿ ಬೀಗ ಬಂಧನದಲ್ಲಿರಿಸಿ, ಅಂಗಡಿಗೂ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಬೆಳಿಗ್ಗೆ ನೋಡಿದರೆ ಅಂಗಡಿಗೆ ಕನ್ನ ಕೊರೆಯಲಾಗಿತ್ತು. ಬೆಳ್ಳಿ ಬಂಗಾರದ ವಸ್ತುಗಳನ್ನು ದೋಚಿದ್ದರಲ್ಲದೆ
ಪಕ್ಕದ ಸೆರಾಮಿಕ್ ಅಂಗಡಿಯಿAದ ಕಂಪ್ಯೂಟರ್, ಮೊಬಾಯಿಲ್ ಇತ್ಯಾದಿ ದೋಚಿದ್ದರು.
ಬಾಗಲಕುಂಟೆ ಪೋಲೀಸರು ತನಿಖೆ ನಡೆಸಿ ರಾಜಸ್ತಾನದ ರಾಯಪುರದಿಂದ ಇಬ್ಬರನ್ನು ಬಂಧಿಸಿ, ಆಭರಣ ವಶಪಡಿಸಿಕೊಂಡು ಬೆಂಗಳೂರಿಗೆ ಕರೆತಂದಿದ್ದಾರೆ. ಒಬ್ಬ ಆರೋಪಿಯನ್ನು ನೆಲಮಂಗಲದಲ್ಲಿ ಬಂಧಿಸಲಾಗಿದೆ. ವಿಚಾರಣೆ ಮುಂದುವರಿದಿದೆ.
