ಮಂಗಳೂರಿನ ಬಾಸ್ಕೆಟ್ಬಾಲ್ ಕ್ಲಬ್ನ ಪ್ರತಿಭಾವಂತ ಆಟಗಾರ ದೀಕ್ಷಿತ್ ಅಮೀನ್ ಅವರು ಭಾರತೀಯ ಶಾಲಾ ಬಾಲಕರ ಅಂಡರ್-18 ಬಾಸ್ಕೆಟ್ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಕರಾವಳಿಯ ಕೀರ್ತಿ ಪತಾಕೆಯನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಲು ಸಜ್ಜಾಗಿದ್ದಾರೆ.

ಭಾರತೀಯ ಸ್ಕೂಲ್ ಗೇಮ್ಸ್ ಫೆಡರೇಷನ್ ವತಿಯಿಂದ ಆಯ್ಕೆಯಾಗಿರುವ ಈ ಭಾರತೀಯ ತಂಡವು, ಜೂನ್ 13ರಿಂದ 23ರ ವರೆಗೆ ಸರ್ಬಿಯಾದ ಝ್ಲಾಟಿ ಬೋರ್ ನಲ್ಲಿ ನಡೆಯಲಿರುವ ’ವಿಶ್ವ ಶಾಲಾ ಬಾಸ್ಕೆಟ್ಬಾಲ್ ಚಾಂಪಿಯನ್ಷಿಪ್’ನಲ್ಲಿ ಭಾಗವಹಿಸಲಿದೆ. ವಿಶೇಷವೆಂದರೆ, ಈ ಉನ್ನತ ಮಟ್ಟದ ಟೂರ್ನಿಗೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ದೀಕ್ಷಿತ್ ಅಮೀನ್ ಪಾತ್ರರಾಗಿದ್ದಾರೆ.
ಮಂಗಳೂರಿನ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿಯಾಗಿರುವ ದೀಕ್ಷಿತ್ ಅವರು ಯಶವಂತ್ ಮತ್ತು ಕ್ಯಾರೋಲ್ ಕಾರ್ಮೆಲಿಟಾ ರೋಸಾರಿಯೊ ಅವರ ಸುಪುತ್ರ. ದೀಕ್ಷಿತ್ ಅವರಿಗೆ ಮಂಗಳೂರು ಬಾಸ್ಕೆಟ್ಬಾಲ್ ಕ್ಲಬ್ನ ಮುಖ್ಯ ಕೋಚ್ ಆದಿತ್ಯ ಮಹಾಲೆ ಅವರು ಉತ್ತಮ ತರಬೇತಿಯನ್ನು ನೀಡುತ್ತಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ನವೀನ್ ಶೆಟ್ಟಿ ಅವರ ವಿಶೇಷ ಪ್ರೋತ್ಸಾಹ ಕ್ರೀಡಾಪಟುಗಳಿದ್ದು, ಅವರ ಗರಡಿಯಲ್ಲಿ ಪಳಗಿದ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಇತಿಹಾಸದಲ್ಲೇ, ಭಾರತೀಯ ಶಾಲಾ ಬಾಲಕರ ಅಂಡರ್-18 ಬಾಸ್ಕೆಟ್ಬಾಲ್ ತಂಡವನ್ನು ಪ್ರತಿನಿಧಿಸುತ್ತಿರುವ ಮೊದಲ ಆಟಗಾರ ದೀಕ್ಷಿತ್ ಅಮೀನ್ ಆಗಿದ್ದಾರೆ.

