ರಾಷ್ಟ್ರ ಮರೆತಿರುವ ರಾಷ್ಟ್ರ ಕವಿಯ ಸ್ಮಾರಕ – ಎಲ್. ಜಿ ಜ್ಯೋತೀಶ್ವರ ಕನ್ನಡದ ಪ್ರಥಮ ರಾಷ್ಟ್ರಕವಿ ಎಂದೇ ಪ್ರಸಿದ್ಧರಾದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ಹುಟ್ಟೂರು ಸದ್ಯ ಕೇರಳದಲ್ಲಿರುವ ಮಂಜೇಶ್ವರದ “ರಾಷ್ಟ್ರಕವಿ ನಿವಾಸ”ಕ್ಕೆ,ಅಂತರರಾಷ್ಟ್ರೀಯ ಬಹುಭಾಷಾ ವಿದ್ವಾಂಸ, ಸಾಂಸ್ಕೃತಿಕ ರಾಯಭಾರಿ, ಕೇಂದ್ರ,ರಾಜ್ಯ ಸರ್ಕಾರಕ್ಕೆ ಸಂಬಂಧ ಪಟ್ಟ ಕನ್ನಡ, ಹಿಂದಿ, ಇಂಗ್ಲಿಷ್, ಭಾಷೆಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಸಾಕ್ಷ್ಯ ಚಿತ್ರಗಳನ್ನು, ನುಡಿ ಚಿತ್ರಗಳನ್ನು, ಜಾಹೀರಾತುಗಳಿಗೆ ನಿರೂಪಣ ಸಾಹಿತ್ಯವನ್ನು ರಚಿಸಿರುವ ಎಲ್. ಜಿ.ಜ್ಯೋತೀಶ್ವರ ಬೆಂಗಳೂರು ಅವರು ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ,ಐತಿಹಾಸಿಕ ಸ್ಮಾರಕಗಳ ಸಾಕ್ಷ್ಯ ಚಿತ್ರದ ಚಿತ್ರೀಕರಣದ ಪೂರ್ವ ಸಮೀಕ್ಷೆಯ ಸಂದರ್ಭದಲ್ಲಿ 2026 ಜೂನ್ 2ರಂದು ಮಂಜೇಶ್ವರಕ್ಕೆ ಆಗಮಿಸಿ, ರಾಷ್ಟ್ರ ಮರೆತಿರುವ ರಾಷ್ಟ್ರ ಕವಿಯ ಸ್ಮಾರಕ ಎಂದು ವಿಷಾದ ವ್ಯಕ್ತಪಡಿಸಿದರು. ಹಲವು ದಶಕಗಳ ಹಿಂದೆ ಕೇರಳ- ಕರ್ನಾಟಕ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ ರಾಷ್ಟ್ರಕವಿಯ ಹೆಸರಿನಲ್ಲಿ ಟ್ರಸ್ಟ್,ಸಮಿತಿಯನ್ನು ರಚಿಸಿ ಕಾರ್ಯ ಪ್ರವೃತ್ತರಾದರೂ, ಇವುಗಳ ನಿರಾಸಕ್ತಿಯಿಂದ ರಾಷ್ಟ್ರಕವಿ ನಿವಾಸ,ಗ್ರಂಥ ಭಂಡಾರ, ಅತಿಥಿ ಗೃಹ, ಸಭಾಂಗಣದ ಕಾಮಗಾರಿಗಳು ಪೂರ್ಣಗೊಳ್ಳದೇ,ಇರುವ ಇಬ್ಬರು ನೌಕರರಿಗೆ ಸಂಬಳ ಪಾವತಿಯಾಗದೇ ಶೋಚನೀಯ ಸ್ಥಿತಿಯಲ್ಲಿದೆ. ರಾಷ್ಟ್ರಕವಿ ಸ್ಮಾರಕದ ಸಮಗ್ರ ಅಭಿವೃದ್ಧಿಗಾಗಿ ಕೇರಳ, ಕರ್ನಾಟಕ ಸರಕಾರದ ನೂತನ ಮುಖ್ಯಮಂತ್ರಿಗಳು, ಸಚಿವರು ಹಾಗೂ ಕಾಸರಗೋಡು ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರು, ಶಾಸಕರು ಮತ್ತು ಕಾಸರಗೋಡು ಜಿಲ್ಲಾ ಪಂಚಾಯತು, ಬ್ಲೋಕ್ ಪಂಚಾಯತು,ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತು ತಮ್ಮ ವಾರ್ಷಿಕ ಬಜೆಟ್ ನಲ್ಲಿ ವಿಶೇಷ ಅನುದಾನವನ್ನು ನೀಡಬೇಕೆಂದು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಒತ್ತಾಯಿಸಿದ್ದಾರೆ.

ರಾಷ್ಟ್ರಕವಿ ಗೋವಿಂದ ಪೈ ಟ್ರಸ್ಟ್ ಸಮಿತಿಯನ್ನು ಪುನರ್ ಸಂಘಟಿಸಿ, ಕೇರಳ- ಕರ್ನಾಟಕ ಸರಕಾರದಿಂದ ನಾಮ ನಿರ್ದೇಶಿತ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಬೇಕೆಂದು ಸಂಬಂಧಪಟ್ಟ ಕೇರಳ- ಕರ್ನಾಟಕ ಸರಕಾರದ ನೂತನ ಮುಖ್ಯಮಂತ್ರಿ,ಸಚಿವರಲ್ಲಿಗೆ ವಿವಿಧ ಸಂಘ ಸಂಸ್ಥೆಗಳ ಪ್ರಾತಿನಿಧಿಕವಾದ ನಿಯೋಗವನ್ನು ಕೊಂಡೊಯ್ಯುವ ಉದ್ದೇಶದಿಂದ ಸಮಾನ ಆಸಕ್ತರ ಸಮ್ಮುಖದಲ್ಲಿ ರೂಫುರೇಷೆ ತಯಾರಿಸಲು ಕಾಸರಗೋಡು, ಮಂಗಳೂರು,ಬೆಂಗಳೂರು, ತಿರುವನಂತಪುರದಲ್ಲಿ ದುಂಡು ಮೇಜಿನ ಪರಿಷತ್ತು ಸಭೆಯನ್ನು ಶೀಘ್ರದಲ್ಲಿ ಕರೆಯಲಾಗುವುದು. ಈ ಕುರಿತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ. ಎಂ.ವೀರಪ್ಪ ಮೊಯ್ಲಿ ಅವರನ್ನು ಅವರ ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಲಾಗುವುದು.ಎಂದು ಎಲ್. ಜಿ. ಜ್ಯೋತೀಶ್ವರ ಬೆಂಗಳೂರು ಹಾಗೂ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

ಕನ್ನಡ ನಿಘಂಟಿನ ಪ್ರಥಮ ಸಂಪಾದಕ, ಬಹು ಭಾಷಾ ಪಂಡಿತ ಎಲ್.ಗುಂಡಪ್ಪ ಅವರು (ಸುಪುತ್ರ ಎಲ್. ಜಿ. ಜ್ಯೋತೀಶ್ವರ) ಕನ್ನಡ,ಸಂಸ್ಕೃತ, ಇಂಗ್ಲಿಷ್ ಮತ್ತು ತಮಿಳು ಪಂಡಿತರು, ಕನ್ನಡ- ಕನ್ನಡ ಮತ್ತು ಇಂಗ್ಲಿಷ್- ಕನ್ನಡ ನಿಘಂಟುಗಳ ಮೊದಲ ಸಂಪಾದಕರು,ಬಿ.ಎಂ.ಶ್ರೀ ಅವರ ನೇರ ಶಿಷ್ಯರು , ಗೋವಿಂದ ಪೈ ಅವರು ಸ್ವತಹ: ತಾವೇ ತಯಾರಿಸಿದ ನೇರಳೆ ಬಣ್ಣದ ಶಾಯಿಯಲ್ಲಿ ಪೋಸ್ಟ್ ಕಾರ್ಡ್ ನಲ್ಲಿ ಸಾಹಿತ್ಯ ಚರ್ಚೆ ಮಾಡುತ್ತಿದ್ದರು ಎಂದು ಗೋವಿಂದ ಪೈ ನಿವಾಸದ ಗಣ್ಯರ ದಾಖಲೆ ಪುಸ್ತಕದಲ್ಲಿ ತನ್ನ ತಂದೆ ಎಲ್.ಗುಂಡಪ್ಪ ಅವರ ಕುರಿತು ಪುತ್ರ ಎಲ್. ಜಿ ಜ್ಯೋತೀಶ್ವರ ಬರೆದಿದ್ದಾರೆ.
ಕನ್ನಡದ ಪುನಶ್ಚೇತನಕ್ಕಾಗಿ 1500 ನಾಲಿಗೆ ನುಲಿಗಳು, 10 ಪದ ಆಟಗಳು, ಕರ್ನಾಟಕದ ಬಗೆಗೆ 10000 ರಸಪ್ರಶ್ನೆ ರಚಿಸಿದ್ದಾರೆ. ಸಾಕ್ಷ್ಯ ಚಿತ್ರ ನಿರ್ಮಾಣ, ನಿರೂಪಣೆಯ ಪರಿಣಿತರಾಗಿದ್ದಾರೆ.ರಾಷ್ಟ್ರಕವಿ ನಿವಾಸ ಸಮುಚ್ಚಯದ ಕಾಯಕಲ್ಪಕ್ಕೆ ಸೇವೆ ಮಾಡುತ್ತೇನೆ. ಮಹಾಕವಿ ಚೇತನಕ್ಕೆ ಗೌರವ ನಮನ ಎಂದು ಹೇಳಿದ್ದಾರೆ.
ಸಂಪರ್ಕ:- ಶಿವರಾಮ ಕಾಸರಗೋಡು,ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ.),ಕನ್ನಡ ಗ್ರಾಮ, ಕಾಸರಗೋಡು -671121
ಮೊಬೈಲ್ :-9448572016


