ಮುಂಬಯಿಯಲ್ಲಿ ಭಾರೀ ಚಿನ್ನ ಕಳ್ಳ ಸಾಗಾಣಿಕೆ ಜಾಲವು ಸಿಕ್ಕಿಬಿದ್ದಿದ್ದು ಬಿಜೆಪಿ ಮುಖಂಡ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ. ಮುಂಬಯಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಮತ್ತು ಪೋಲೀಸರು ಭಾರೀ ಸ್ವರ್ಣ ಕಳ್ಳ ಸಾಗಾಣಿಕೆ ಜಾಲವನ್ನು ಭೇದಿಸಿದ್ದಾರೆ. ಅಷ್ಟಿಷ್ಟು ಅಲ್ಲ ಐದು ಕೋಟಿ ರೂಪಾಯಿ ಮೌಲ್ಯದ ಕನಕವನ್ನು ಕದ್ದೊಯ್ಯಲಾಗುತ್ತಿತ್ತು.

ಎಐ ಏರ್ಪೋರ್ಟ್ ಸರ್ವೀಸಸ್ ಉದ್ಯೋಗಿ ರೋಹಿತ್ ಸಿಂಗ್, ಸಂತೋಷ್ ಪಾಲ್ ಮತ್ತು ಅಜಿತ್ ಆಚರೇಕರ್, ಸಮೀವುಲ್ಲಾ ಶಾ, ಬಾಂಗ್ಲಾದೇಶದ ಮೊಹಮದ್ ಕ್ವಾಸರ್, ಶ್ರೀಲಂಕಾದ ಫಲೀಲ್ ಕಾಸಿಂ, ರಿಪ್ಖಾನ್ ಹಮೀದ್ ಲೆಬ್ಬೆಯವರನ್ನು ಬಂಧಿಸಲಾಗಿದೆ. ಇವರಲ್ಲಿ ಅಜಿತ್ ಆಚರೇಕರ್ ಬಿಜೆಪಿ ನಾಯಕನಾಗಿದ್ದು, ಮಹಾರಾಷ್ಟ್ರದ ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚವ್ಹಾಣ್ ಮೂಲಕ ಬಿಜೆಪಿ ಸೇರಿದ್ದರು.

ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದ ಪಕ್ಕದ ಐಶಾರಾಮಿ ಹೋಟೆಲ್ ಮೇಲೆ ಕಣ್ಣಿಡಲಾಗಿತ್ತು. ಮುಂಜಾವ ಎರಡೂವರೆ ಗಂಟೆಯ ಹೊತ್ತಿಗೆ ರೋಹಿತ್ ಸಿಂಗ್ ಎಂಬಾತ ಕಪ್ಪು ಕಟ್ಟೊಂದನ್ನು ಸಮೀವುಲ್ಲಾ ಶಾನಿಗೆ ಹಸ್ತಾಂತರಿಸಿದ. ಕೂಡಲೆ ಅವರನ್ನು ಬಂಧಿಸಿ, ಕಟ್ಟು ವಶಪಡಿಸಿಕೊಂಡು, ಸಂಬಂಧಿಸಿದ ಇತರರನ್ನೂ ವಶಕ್ಕೆ ಪಡೆದರು. ಕಟ್ಟಿನಲ್ಲಿ ಚಿನ್ನದ ತುಣುಕುಗಳನ್ನು ಮೇಣದಲ್ಲಿ ಹುದುಗಿಸಿ ಮೂರು ಪದರದ ಪ್ಯಾಕ್ ಮಾಡಲಾಗಿತ್ತು.


