ಭಾರತವು ಅತಿ ಹೆಚ್ಚು ಜಾನುವಾರು ಹೊಂದಿರುವ ದೇಶವಾದರೂ ಅತಿ ದನ ಹೊಂದಿರುವ ದೇಶ ಅಲ್ಲ. ಅತಿ ಹೆಚ್ಚು ಹಸು ಹೊಂದಿರುವ ದೇಶ ಬ್ರೆಜಿಲ್. ಜಾನುವಾರುಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ತಳಿಗಳು ಇವೆ. ಮಿಶ್ರ ತಳಿಗಳು ಬರುತ್ತಿರುವುದರಿಂದ ಆ ಸಂಖ್ಯೆ ಹೆಚ್ಚುತ್ತಲೇ ಇದೆ. ಹತ್ತೂವರೆ ಸಾವಿರ ವರುಷಗಳ ಹಿಂದೆ ಇರಾನ್ ಅನಟೋಲಿಯಾ ನಡುವೆ ಜನರು ದನ ಪಳಗಿಸಿ ಸಾಕಿಕೊಂಡರು. ಮೂಡಣ ಏಶಿಯಾದವರು ಎಮ್ಮೆ ಪಳಗಿಸಿಕೊಂಡರು.

ಆಫ್ರಿಕನ್ ಬೈಸನ್, ಅಮೆರಿಕನ್ ಬೈಸನ್ ಇದ್ದರೂ ವಾಟರ್ ಬಫಲೋ ಎನ್ನುವ ಏಶಿಯಾದ ಎಮ್ಮೆಗಳು ದನಗಳಷ್ಟೆ ಪ್ರಾಮುಖ್ಯತೆ ಪಡೆದಿವೆ. ಹಾಲು, ಮಾಂಸ, ಚರ್ಮ, ದುಡಿಮೆ, ಕೃಷಿಗಳಲ್ಲಿ ಜಾನುವಾರು ಸಹಾಯಕ. ಭಾರತವು 30 ಕೋಟಿ ಅತಿ ಹೆಚ್ಚು ಜಾನುವಾರು, ಬ್ರೆಜಿಲ್ 23.5 ಕೋಟಿ ಎಂದು ಮೊದಲಿನೆರಡು ಸ್ಥಾನ ಪಡೆದಿವೆ. ಆದರೆ ದನಗಳನ್ನು ಮಾತ್ರ ತೆಗೆದುಕೊಂಡರೆ ಬ್ರೆಜಿಲ್ 23 ಕೋಟಿ ಗೋವುಗಳೊಡನೆ ಮೊದಲ ಸ್ಥಾನದಲ್ಲಿದೆ. ಭಾರತವು 19 ಕೋಟಿ ಹಸುಗಳೊಡನೆ ಎರಡನೆಯ ಸ್ಥಾನದಲ್ಲಿದೆ.


