ಕ್ಯಾನ್ಸರ್ನಿಂದ ಮೃತಪಟ್ಟ ಮಾಜಿ ಆರ್ ಎಸ್ ಎಸ್ ಕಾರ್ಯಕರ್ತನ ಅಂತ್ಯಸಂಸ್ಕಾರ ಮುಸ್ಲಿಂ ಮಹಿಳೆ ನೆರವೇರಿಸಿದ ಪ್ರಸಂಗ ಕೇರಳದ ಕಾಸರಗೋಡಿನಲ್ಲಿ ನಡೆದಿದೆ. ಆರ್ ಎಸ್ ಎಸ್ ಸಂಘಟನೆಯಲ್ಲಿ 20 ವರ್ಷಗಳ ಹಿಂದೆ ತೊಡಗಿಸಿಕೊಂಡಿದ್ದ ನಾರಾಯಣ ಅವರು ಕ್ಯಾನ್ಸರ್ನಿಂದ ಮೃತಪಟ್ಟಿದ್ದರು. ಅಂತ್ಯಸಂಸ್ಕಾರ ನೆರವೇರಿಸಲು ಅವರ ಕುಟುಂಬದ ಸದಸ್ಯರು ಮುಂದೆ ಬಂದಿರಲಿಲ್ಲ. ಹಿಂದೂ ಸಹೋದರನ ಅಂತ್ಯಕ್ರಿಯೆ ನೆರವೇರಿಸಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಇಕ್ಬಾಲ್ ಸೌಹಾರ್ಧತೆಗೆ ಸಾಕ್ಷಿಯಾಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಧರ್ಮ, ರಾಜಕೀಯ ಗಡಿಗಳನ್ನು ಮರೆತು ಕುಟುಂಬ ಸದಸ್ಯರಂತೆ ಇರ್ಫಾನಾ ಇಕ್ಬಾಲ್ ಮಾನವೀಯತೆ ಸಾರಿದ್ದಾರೆ.

ಒಂದು ತಿಂಗಳ ಹಿಂದೆ ಅಂಗಡಿ ವರಾಂಡವೊಂದರಲ್ಲಿ ಅನ್ನ, ಆಹಾರ ಇಲ್ಲದೆ ದಯನೀಯ ಸ್ಥಿತಿಯಲ್ಲಿ ನಾರಾಯಣ ಪತ್ತೆಯಾಗಿದ್ದು, ವಾರ್ಡ್ ಸದಸ್ಯ ಶೆರೀಫ್ ಚೀನಾಲ ನೀಡಿದ ಮಾಹಿತಿಯಂತೆ ಇರ್ಫಾನಾ ಸ್ಥಳಕ್ಕೆ ತಲಪಿ ಬಳಿಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವೈದ್ಯಕೀಯ ಅಧಿಕಾರಿಗೆ ತಿಳಿಸಿದ್ದರು. ಸೂಚನೆಯಂತೆ ಉಪ್ಪಳ ಶೇಖ್ ಸಯ್ಯಿದ್ ಫೌಂಡೇಶನ್ ಕಾರ್ಯಕರ್ತರು ಪ್ರಾಥಮಿಕ ಚಿಕಿತ್ಸೆ ನೀಡಿ ಕೋಜಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ದಾಖಲಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ನಾರಾಯಣ ಅವರು ಗುರುವಾರ ಮೃತಪಟ್ಟಿದ್ದರು.
ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿರುವ ಜಿಲ್ಲಾ ಮಹಿಳಾ ಲೀಗ್ ಮುಖಂಡೆ ಇರ್ಫಾನಾ ಇಕ್ಬಾಲ್ ಮನೆಯವರಿಂದ ತೊರೆಯಲ್ಪಟ್ಟ 50 ರಷ್ಟು ಪೋಷಕರನ್ನು ಸಂರಕ್ಷಿಸುವ ಉಪ್ಪಳದ ಶೇಖ್ ಸಯ್ಯಿದ್ ವೃದ್ಧ ಮಂದಿರದ ಸ್ಥಾಪಕರಾಗಿದ್ದು, ಪತಿ ಇಕ್ಬಾಲ್ ಜೊತೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.


