ಮಂಗಳೂರು : ಮಹಾನಗರ ಪಾಲಿಕೆ ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಏಕಪಕ್ಷೀಯ ಕಾರ್ಯಾಚರಣೆ ನಡೆಸಿದರೆ ಹೋರಾಟ ತೀವ್ರಗೊಳಿಸಲು ಸಿಐಟಿಯು ನಿರ್ಧರಿಸಿದೆ.

ಬೋಳಾರದ ಎ.ಕೆ.ಜಿ ಭವನದಲ್ಲಿ ಬೀದಿಬದಿ ವ್ಯಾಪಾರಿಗಳ ಬದುಕುವ ಹಕ್ಕಿನ ರಕ್ಷಣೆಗಾಗಿ,ನಗರಪಾಲಿಕೆ ನಡೆಸುತ್ತಿರುವ ಬೀದಿ ವ್ಯಾಪಾರದ ಕಾನೂನು ಉಲ್ಲಂಘಿಸಿ ನಡೆಸುತ್ತಿರುವ ಧಾಳಿಯನ್ನು ವಿರೋಧಿಸಿ ಇಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ನೇತೃತ್ವದಲ್ಲಿ ಜರಗಿದ ಸಂಘಟನಾ ಸಮಾವೇಶ ನಡೆಯಿತು.

ಈ ಸಮಾವೇಶವನ್ನು ಉದ್ಘಾಟಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಮಹಾನಗರ ಪಾಲಿಕೆ ಆಯುಕ್ತರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಕಾನೂನಾತ್ಮಕ ಅಂಶಗಳನ್ನು ಪರಿಶೀಲನೆ ಮಾಡದೆ ನಿರ್ಧಾರ ಕೈಗೊಳ್ಳುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದರು.
ಸಂಘದ ಗೌರವಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ ಬಡವರ ಮೇಲೆ ಬುಲ್ದೊಜರ್ ಬಳಸುವುದು ಕರ್ನಾಟಕದ ಮಾದರಿ ಅಲ್ಲ ಮಂಗಳೂರಲ್ಲಿ ಉತ್ತರ ಪ್ರದೇಶದ ಯೋಗಿ ಸರಕಾರದ ಮಾದರಿಯಲ್ಲಿ ಬುಲ್ದೊಜರ್ ಬಳಸಿ ಅಂಗವಿಕಲರನ್ನು ನೋಡದೆ ಅಮಾನವೀಯವಾಗಿ ಧಾಳಿ ನಡೆಸುತ್ತಿದ್ದರೂ ರಾಜ್ಯದ ಕಾಂಗ್ರೆಸ್ ಸರಕಾರ ಮೌನ ವಹಿಸಿರುವುದು ಯಾಕಾಗಿ ಎಂದು ಪ್ರಶ್ನಿಸಿದ ಅವರು ನಗರ ಪಾಲಿಕೆ ಅಧಿಕಾರಿಗಳು ಪುಟ್ ಪಾತ್ ತೆರವು ಹೆಸರಿನಲ್ಲಿ ಬಡವರ ಮೇಲೆ ಕಠೋರವಾಗಿ ವರ್ತಿಸುತ್ತಿದೆ ನಗರಪಾಲಿಕೆ ಹಠಮಾರಿ ಧೋರಣೆ ಕೈಬಿಡದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದು ಅನಿವಾರ್ಯ ಆಗಲಿದೆ ಎಚ್ಚರಿಕೆ ನೀಡಿದರು.
ಸಂಘದ ಮುಖಂಡರಾದ ಸಿಕಂದರ್ ಬೇಗ್, ವಿಜಯ್ ಜೈನ್, ಶಿವಾನಂದ, ಜ್ಯೋತಿ ಬಾಯಿ, ನಾಗರಾಜ, ಲಕ್ಕಮ್ಮ ಮಾತನಾಡಿದರು.
ಸಂಘದ ಪ್ರಮುಖರಾದ ಹಸನ್ ಕುದ್ರೋಳಿ, ಹಂಝ ಮೊಹಮ್ಮದ್,ಖಾದರ್ ವಾಮಂಜೂರ್,ಚಂದ್ರಶೇಖರ ರಾವ್, ಎಂ.ಎನ್ ಶಿವಪ್ಪ, ಸೆಲ್ವರಾಜ್, ಅಬ್ದುಲ್ ಖಾದರ್,ರಿಯಾಜ್ ಮದಕ, ನೌಶಾದ್ ಕಣ್ಣೂರ್, ರಫೀಕ್ ಪಾಂಡೇಶ್ವರ, ಖಾಜಾ ಮೋಹಿಯುದ್ದಿನ್, ಸಾಬುದ್ದಿನ್, ಸ್ಟಾನಿ ಡಿಸೋಜಾ, ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್. ಎಸ್ ಸ್ವಾಗತಿಸಿ, ವಂದಿಸಿದರು.


