ಲೀಗ್ ಹಂತವನ್ನು ಅಜೇಯವಾಗಿ ದಾಟಿದ್ದ ಇಂಗ್ಲೆಂಡ್ ತಂಡವು 32ರ ಘಟ್ಟದಲ್ಲಿ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋವನ್ನು 2-1 ಗೋಲುಗಳಿಂದ ಸೋಲಿಸಿ ಹದಿನಾರರ ಪೈಪೋಟಿಗೆ ನೆಗೆಯಿತು.
ಲೀಗ್ ಹಂತದಲ್ಲಿ ಕ್ರೋಶಿಯಾ ವಿರುದ್ದ 4-2 ಗೆಲುವು, ಪನಾಮಾದೆದುರು 2-0 ಜಯ ಹಾಗೂ ಘಾನಾದೆದುರು 0-0 ಡ್ರಾ ಮಾಡಿಕೊಂಡು ಸೋಲಿಲ್ಲದೆ 32ಕ್ಕೆ ಬಂದಿದ್ದ ಇಂಗ್ಲೆಂಡ್ ಕಾಂಗೋ ಪ್ರಜಾಪ್ರಭುತ್ವ ತಂಡವನ್ನು 2-1ರಿಂದ ಸೋಲಿಸಿ ಅಜೇಯವಾಗಿಯೇ ಹದಿನಾರರ ಹಂತ ಪ್ರವೇಶಿಸಿತು. ಇಂಗ್ಲೆಂಡ್ ತಂಡವು 1966ರಲ್ಲಿ ಒಮ್ಮೆ ಮಾತ್ರ ಫಿಫಾ ವಿಶ್ವ ಕಪ್ ಗೆದ್ದಿದೆ. ಆಗ ಅದು ಜರ್ಮನಿ ತಂಡವನ್ನು 4-2 ಗೋಲುಗಳಿಂದ ಸೋಲಿಸಿತ್ತು.
ಫಿಫಾ ವಿಶ್ವ ಕಪ್ನಲ್ಲಿ ಬ್ರಿಟನ್ ಇಲ್ಲವೇ ಯುನೈಟೆಡ್ ಕಿಂಗ್ಡಮ್ಮಿನ ಇಂಗ್ಲೆಂಡ್ ಹಾಗೂ ಸ್ಕಾಟ್ಲೆಂಡ್ ಪ್ರತ್ಯೇಕವಾಗಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತವೆ. ಸ್ಕಾಟ್ಲೆಂಡ್ ಹಲವು ಬಾರಿ ಅರ್ಹತೆ ಪಡೆದಿದ್ದರೂ ಗುಂಪು ಪಂದ್ಯದಿಂದ ಮುಂದಕ್ಕೆ ಹೆಜ್ಜೆಯಿಟ್ಟಿಲ್ಲ. ಈ ಬಾರಿಯೂ ಅದು ಲೀಗ್ ಹಂತದಲ್ಲೇ ಅದು ಹೊರ ಬಿದ್ದಿದೆ. ಆದರೆ ಹೈತಿ ವಿರುದ್ಧ 1-0 ಗೋಲುಗಳ ಗೆಲುವು ಅದರ ಮೊದಲ ಫಿಫಾ ವಿಶ್ವ ಕಪ್ ವಿಜಯವಾಗಿದೆ.

ಜುಲಾಯಿ 1ರ ಬೆಲ್ಜಿಯಂ ಸೆನೆಗಲ್ ಪಂದ್ಯ 1-1 ಸಮವಾಗಿತ್ತು. ಅಂತಿಮವಾಗಿ ಬೆಲ್ಜಿಯಂ 3-2 ಗೋಲುಗಳಿಂದ ಸೆನೆಗಲನ್ನು ಕೆಡವಿ ಪ್ರಿಕ್ವಾರ್ಟರ್ಗೇರಿತು. ಬೆಲ್ಜಿಯಂನ ಟೀಲೆಮನ್ರನ್ನು ಸೆನೆಗಲ್ ಆಟಗಾರರು ಬೀಳಿಸಿದ್ದು ಮುಳುವಾಯಿತು. ಅದರಿಂದ ಸಿಕ್ಕ ಪೆನಾಲ್ಟಿ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಬೆಲ್ಜಿಯಂ ಜಯ ಸಾಧಿಸಿತು.
ಯುಎಸ್ಎ ಬೋಸ್ನಿಯಾ ಹೆರ್ಜ್ಗೊವಿನಾ ಪಂದ್ಯ ಗೋಲಿಲ್ಲದೆ ಮುನ್ನಡೆದಿತ್ತು. ಎರಡನೆಯ ಅವಧಿ ಮತ್ತು ಅಂತಿಮ ಕ್ಷಣದಲ್ಲಿ ಗೋಲು ಗಳಿಸಿದ ಯುಎಸ್ಎ 2-0ಯಿಂದ ಪ್ರಿಕ್ವಾರ್ಟರಿಗೆ ಜಿಗಿಯಿತು. ವಿಶೇಷವೆಂದರೆ ಹದಿನಾರರ ಘಟ್ಟದಲ್ಲಿ ಬೆಲ್ಜಿಯಂ ಯುಎಸ್ಎ ಮುಖಾಮುಖಿಯಾಗಲಿವೆ.

