ಚಿತ್ರದುರ್ಗ:ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದ ಆವರಣದಲ್ಲಿ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ 17ನೇ ಪಟ್ಟಾಭಿಷೇಕ ಮಹೋತ್ಸವ, 28ನೇ ಲಾಂಛನ ದೀಕ್ಷಾ ಮಹೋತ್ಸವ, 40ನೇ ಜನ್ಮ ವರ್ಧಂತ್ಯೋತ್ಸವದ ನಿಮಿತ್ತ ಪ್ರತಿ ವರ್ಷದಂತೆ ಈ ವರ್ಷವೂ ಜುಲೈ 18 ರಂದು ಬೃಹತ್ ಮಟ್ಟದಲ್ಲಿ “ರಾಷ್ಟ್ರೀಯ ಭೋವಿ ಜನೋತ್ಸವ” ನಡೆಯಲಿದೆ.ಭೋವಿ ಜನಾಂಗದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಭ್ರಮದ ಆಚರಣೆಯಾದ ಈ ಉತ್ಸವಕ್ಕೆ ಸಂಘಟನೆ ಭರದಿಂದ ಸಾಗುತ್ತಿವೆ.
ಈ ಬಾರಿಯ ಜನೋತ್ಸವದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ್ ಅವರು ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಸಚಿವರುಗಳು ಭಾಗವಹಿಸಲಿದ್ದಾರೆ.ಅಧ್ಯಕ್ಷತೆಯನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿವಹಿಸುವರು. ನೇತೃತ್ವವನ್ನು ಮಾಜಿ ಸಚಿವ ಶಿವರಾಜ ತಂಗಡಗಿ ವಹಿಸುವರು. ದಿಕ್ಸೂಚಿ ನುಡಿಗಳನ್ನು ಶಾಸಕ ಎಂ ಚಂದ್ರಪ್ಪ ನುಡಿಯಲಿದ್ದಾರೆ. ಭೋವಿ ನಿಗಮದ ಅಧ್ಯಕ್ಷರು ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ಎಂ ರಾಮಪ್ಪ ಸ್ವಾಗತಿಸಲಿದ್ದಾರೆ. ಪಾವಗಡ ಶಾಸಕ ವಿ ವೆಂಕಟೇಶ ಹಾಗೂ ಪುಲಕೇಶಿ ನಗರದ ಶಾಸಕ ಎ ಸಿ ಶ್ರೀನಿವಾಸ ಹಾಗೂ ಭೋವಿ ಸಮಾಜದ ಹಾಲಿ ಮಾಜಿ ಸಚಿವ ಶಾಸಕರು ಘನ ಉಪಸ್ಥಿತಿಯಿ ವಹಿಸಲಿದ್ದಾರೆ.
ಸಮಾಜದ ಐಎಎಸ್, ಕೆಎಎಸ್ ಅಧಿಕಾರಿಗಳು ಮತ್ತು ಅಂತರರಾಜ್ಯ ಮಟ್ಟದ ಭೋವಿ ಜನಾಂಗದ ಪ್ರಮುಖ ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ವಿವಿಧ ಜಿಲ್ಲೆಗಳಿಂದ ಭೋವಿ ಸಮಾಜದ ಲಕ್ಷಾಂತರ ಬಾಂಧವರು ಈ ಭವ್ಯ ಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಉತ್ಸವದ ಪ್ರಮುಖ ಆಕರ್ಷಣೆಗಳು ಮತ್ತು ಕಾರ್ಯಕ್ರಮಗಳು,ಭೋವಿ ಜನೋತ್ಸವವು ಕೇವಲ ಒಂದು ಆಚರಣೆಯಷ್ಟೇ ಆಗಿರದೆ, ಸಮಾಜದ ಏಳಿಗೆ ಹಾಗೂ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಹತ್ತಾರು ಸತ್ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ.
1) ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ: ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ಪಿಎಚ್.ಡಿ ಪದವೀಧರರಿಗೆ ಹಾಗೂ ಎಂ.ಬಿ.ಬಿ.ಎಸ್ ಮುಗಿಸಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು.
2) ಸಮಾಜದ ಜನರಿಗಾಗಿ ರಕ್ತದಾನ ಶಿಬಿರ ಹಾಗೂ ಸಿದ್ಧರಾಮೇಶ್ವರರ ಕುರಿತು ವಿಶೇಷ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿದೆ.3) ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾದ ಸಮಾಜದ ನಾಯಕರಿಗೆ ಹಾಗೂ ಭೋವಿ ವಡ್ಡರ ಜನಾಂಗಕ್ಕೆ ವಿಶೇಷವಾಗಿ ಕೊಡುಗೆ ನೀಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ.
4) ಹಸಿರೋತ್ಸವ (ಸಸಿ ನೆಡುವ ಕಾರ್ಯಕ್ರಮ)
5) ಸಮಾಜದ ಯುವಜನತೆಗಾಗಿ ವಧು-ವರರ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಭೋವಿ ಸಮಾಜದ ಯುವ ಮುಖಂಡ ಪವನ್ ಕುಮಾರ್ ಶಿರ್ವ ತಿಳಿಸಿದ್ದಾರೆ..


