ಪುತ್ತೂರು: ಪುತ್ತೂರಿನಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜಿಗೆ ಮಂಜೂರಾತಿ ನೀಡಿ ಅಗತ್ಯ ಮೂಲಸೌಕರ್ಯ ಹಾಗೂ ಮಾನವ ಸಂಪನ್ಮೂಲ ಒದಗಿಸಿಕೊಡುವಂತೆ ರಾಜ್ಯ ಆರೋಗ್ಯ ಸಚಿವ ಯು ಟಿ ಖಾದರ್ ರವರಿಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಶಾಸಕರು ಪುತ್ತೂರು ತಾಲ್ಲೂಕಿನ ಬನ್ನೂರು ಗ್ರಾಮದಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ೧೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾಪವನ್ನು ಸಲ್ಲಿಸಲಾಗಿದೆ. ಗ್ರಾಮದ ಕುಂಟ್ಯಾನ ಎಂಬಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ೫.೦೦ ಎಕರೆ ಜಮೀನನ್ನು ಆಯುಷ್ ಆಸ್ಪತ್ರೆ ನಿರ್ಮಾಣ ಮಾಡುವ ಉದ್ದೇಶದಿಂದ ದ ಕ ಜಿಲ್ಲಾ ಆಯುಷ್ ಇಲಾಖೆ ಹೆಸರಲ್ಲಿ ಕಾಯ್ದಿರಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ತಹಶೀಲ್ದಾರರು ಪುತ್ತೂರು ತಾಲ್ಲೂಕು ಇವರು ಬನ್ನೂರು ಗ್ರಾಮದ ಸರ್ವೆ ನಂ.೮೪/ರಲ್ಲಿ ೫.೦೦ ಎಕರೆ ಜಮೀನನ್ನು ಆಯುಷ್ ಆಸ್ಪತ್ರೆ ನಿರ್ಮಾಣದ ಉದ್ದೇಶದಿಂದ ಆಯುಷ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಹೆಸರಿಗೆ ಕಾಯ್ದಿರಿಸಿದ್ದು ,ಇದರ ಆರ್.ಟಿ.ಸಿ,ಯನ್ನು ಆಯುಷ್ ಇಲಾಖೆಗೆ ಹಸ್ತಾಂತರಿಸಲಾಗಿದೆ.ನಿಗಧಿತ ಜಾಗದಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ೧೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕಾಗಿ ಮಂಜೂರಾತಿ ನೀಡಿ ಅಗತ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ಒದಗಿಸಿಕೊಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.


