HomeFresh Newsಜಾಗತಿಕ ಮಟ್ಟದ ‘ವಿಕಿಮೇನಿಯಾ 2026’ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಭರತೇಶ ಅಲಸಂಡೆಮಜಲು ಆಯ್ಕೆ

ಜಾಗತಿಕ ಮಟ್ಟದ ‘ವಿಕಿಮೇನಿಯಾ 2026’ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಭರತೇಶ ಅಲಸಂಡೆಮಜಲು ಆಯ್ಕೆ

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪಿಎಚ್.ಡಿ ಸಂಶೋಧಕ ವಿದ್ಯಾರ್ಥಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಹಾಗೂ ಬ್ಯಾಂಕ್ ಆಫ್ ಬರೋಡದ ಉದ್ಯೋಗಿ ಪೆರ್ಲಂಪಾಡಿಯ ಭರತೇಶ ಅಲಸಂಡೆಮಜಲು ಅವರು ಜುಲೈ ತಿಂಗಳ 20ರಿಂದ 26ರವರೆಗೆ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ‘ವಿಕಿಮೇನಿಯಾ 2026’ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರೆ.
​ಮಂಗಳೂರಿನ ಕರಾವಳಿ ವಿಕಿಮೀಡಿಯನ್ಸ್ ಯೂಸ‌ರ್ ಗ್ರೂಪಿನ ಸಕ್ರಿಯ ಸದಸ್ಯರಾದ ಇವರು ತುಳು ಮತ್ತು ಕನ್ನಡ ಭಾಷೆಯ ರಾಯಭಾರಿಯಾಗಿ ಈ ಜಾಗತಿಕ ಸಮ್ಮೇಳನವನ್ನು ಪ್ರತಿನಿಧಿಸಲಿದ್ದಾರೆ. ಪ್ರಪಂಚದಾದ್ಯಂತದ ನೂರಾರು ಮುಕ್ತ ಜ್ಞಾನ ಪ್ರಸಾರಕರು ಮತ್ತು ಸ್ವಯಂಸೇವಕರು ಭಾಗವಹಿಸುವ ಈ ಸಮ್ಮೇಳನದಲ್ಲಿ ಇವರು ಡಿಜಿಟಲ್ ಸಮಾನತೆ, ಸ್ಥಳೀಯ ತಂತ್ರಜ್ಞಾನದ ಅಳವಡಿಕೆ ಹಾಗೂ ಜಾಗತಿಕ ದಕ್ಷಿಣದ (Global South) ಪ್ರಾದೇಶಿಕ ಭಾಷೆಗಳ ಸವಾಲುಗಳು ಮತ್ತು ಜೀವಂತ ಪರಂಪರೆಯ ದಾಖಲೀಕರಣದ ಬಗೆಗಿನ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ತುಳು ವಿಕಿಪೀಡಿಯಾದ ದಶಮಾನೋತ್ಸವ ಯೋಜನೆಗಳಲ್ಲೂ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.
​ಅರೆಭಾಷೆ ಅಕಾಡೆಮಿಯ ಸಂದರ್ಭದಲ್ಲಿ ಮಹತ್ವದ ಕೊಡುಗೆ ನೀಡಿರುವ ಭರತೇಶ ಅವರು, ಅರೆಭಾಷೆಯ ಇತಿಹಾಸದಲ್ಲೇ ಮೈಲಿಗಲ್ಲಾದ ಮೊದಲ ‘ಅರೆಭಾಷೆ ವಿಶ್ವಕೋಶ’ದ ಮುಖ್ಯ ಸಂಪಾದಕರಾಗಿ ಹಾಗೂ 18,000 ಪದಗಳನ್ನೊಳಗೊಂಡ ಬೃಹತ್ ‘ಅರೆಭಾಷೆ ನಿಘಂಟು’ವಿನ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಇವರು ಪುತ್ತೂರು ವಲಯದ ಬ್ಯಾಂಕ್ ಆಫ್ ಬರೋಡಾದ ಕಾವು ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಪೆರ್ಲಂಪಾಡಿಯ ಅಲಸಂಡೆಮಜಲು ಮನೆ ಬೋಜಪ್ಪ ಗೌಡ ಎ ಹಾಗೂ ಗಿರಿಜಾ ಎ ಬಿ. ದಂಪತಿಯ ಪುತ್ರ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments