ಕಾಸರಗೋಡು: ಕಾಸರಗೋಡು ಜಿಲ್ಲೆಯ ದೇರಂಬಳದಲ್ಲಿ ಶಿಥಿಲಗೊಂಡಿರುವ ಸೇತುವೆ ಮತ್ತೊಮ್ಮೆ ಭಾರೀ ದುರಂತದ ಎಚ್ಚರಿಕೆಯನ್ನು ನೀಡಿದೆ. ತುಂಬಿ ಹರಿಯುತ್ತಿದ್ದ ಹೊಳೆಯ ಮೇಲಿನ ಈ ಅಪಾಯಕಾರಿ ಸೇತುವೆಯಲ್ಲಿ ಸಂಚರಿಸುತ್ತಿದ್ದ ಯುವತಿಯೊಬ್ಬರು ಆಕಸ್ಮಿಕವಾಗಿ ಜಾರಿ ಹೊಳೆಗೆ ಬಿದ್ದ ಘಟನೆ ನಡೆದಿದೆ. ಇದೇ ವೇಳೆ ಸ್ಥಳದಲ್ಲಿದ್ದ ಉದಯಕುಮಾರ್ ಶೆಟ್ಟಿ ಅವರು ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಹೊಳೆಗೆ ಧುಮುಕಿ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸುವ ಮೂಲಕ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಹೊಳೆಯಲ್ಲಿ ನೀರಿನ ಹರಿವು ತೀವ್ರವಾಗಿದ್ದ ಕಾರಣ ಯುವತಿಯ ಜೀವಕ್ಕೆ ಗಂಭೀರ ಅಪಾಯ ಎದುರಾಗಿತ್ತು. ಆದರೆ ಉದಯಕುಮಾರ್ ಶೆಟ್ಟಿ ಅವರು ಸಮಯಪ್ರಜ್ಞೆ ಹಾಗೂ ಧೈರ್ಯ ಪ್ರದರ್ಶಿಸಿ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದ ಪರಿಣಾಮ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಸಾಹಸಕ್ಕೆ ಸ್ಥಳೀಯರು, ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, “ಆಪದ್ಬಾಂಧವ” ಎಂದು ಕೊಂಡಾಡುತ್ತಿದ್ದಾರೆ.

ಇನ್ನೊಂದೆಡೆ, ಈ ಘಟನೆ ಶಿಥಿಲಗೊಂಡಿರುವ ದೇರಂಬಳ ಸೇತುವೆಯ ದುಸ್ಥಿತಿಯನ್ನು ಮತ್ತೆ ಬಹಿರಂಗಪಡಿಸಿದೆ. ಕಳೆದ ಹಲವು ವರ್ಷಗಳಿಂದ ಸೇತುವೆ ಅಪಾಯದ ಸ್ಥಿತಿಯಲ್ಲಿದ್ದು, ಮಳೆಗಾಲದಲ್ಲಿ ಸಂಚಾರ ಇನ್ನಷ್ಟು ಅಪಾಯಕಾರಿಯಾಗುತ್ತದೆ ಎಂದು ಸ್ಥಳೀಯರು ನಿರಂತರವಾಗಿ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಕಳೆದ ವಾರವೂ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಸಂಬಂಧಪಟ್ಟ ಇಲಾಖೆಯ ಗಮನಕ್ಕೂ ಸೇತುವೆಯ ದುಸ್ಥಿತಿಯನ್ನು ತರಲಾಗಿತ್ತು. ಆದರೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸೇತುವೆಯನ್ನು ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು, ರೈತರು ಹಾಗೂ ವಾಹನ ಸವಾರರು ಅವಲಂಬಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬ್ಲಾಕ್ ಪಂಚಾಯತ್ ಸದಸ್ಯ ಜ್ಯೋತಿಪೀ ರೈ ಅವರು ಕೂಡ ಸೇತುವೆಯ ದುಸ್ಥಿತಿಯನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿರುವುದಾಗಿ ತಿಳಿದುಬಂದಿದೆ. ಆದಾಗ್ಯೂ ಇದುವರೆಗೆ ದುರಸ್ತಿ ಕಾಮಗಾರಿ ಅಥವಾ ಹೊಸ ಸೇತುವೆ ನಿರ್ಮಾಣದ ಕುರಿತು ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.
ಇಂದಿನ ಘಟನೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಉದಯಕುಮಾರ್ ಶೆಟ್ಟಿ ಅವರ ಸಮಯೋಚಿತ ಸಾಹಸದಿಂದ ಒಂದು ಜೀವ ಉಳಿದಿದೆ. ಆದರೆ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ತಕ್ಷಣವೇ ಶಿಥಿಲಗೊಂಡಿರುವ ಸೇತುವೆಯನ್ನು ದುರಸ್ತಿ ಮಾಡಬೇಕು ಅಥವಾ ಶಾಶ್ವತ ಪರಿಹಾರವಾಗಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತೊಂದು ದುರಂತ ಸಂಭವಿಸುವವರೆಗೆ ಕಾಯದೆ ತುರ್ತು ಕ್ರಮ ಕೈಗೊಂಡು ಜನರ ಸುರಕ್ಷಿತ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕಿದೆ. ಈ ಘಟನೆಯು ಅಭಿವೃದ್ಧಿ ಕಾಮಗಾರಿಗಳಲ್ಲಿನ ವಿಳಂಬ ಮತ್ತು ನಿರ್ಲಕ್ಷ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ದೇರಂಬಳದ ಜನರು ಈಗ ಮಾತಲ್ಲ, ಕಾರ್ಯರೂಪದ ಪರಿಹಾರವನ್ನು ನಿರೀಕ್ಷಿಸುತ್ತಿದ್ದಾರೆ.


