ಶಂಕರಪುರ: ಮಾನವನ ಆರೋಗ್ಯಕ್ಕೆ ಸವಾಲೊಡ್ಡುವ ಸುಮಾರು ಶೇ.80ರಷ್ಟು ಕಾಯಿಲೆಗಳಿಗೆ ಆಯುರ್ವೇದ, ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯಂತಹ ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಶಾಶ್ವತ ಪರಿಹಾರವಿದೆ ಎಂದು ಮಣಿಪಾಲದ ಮುನಿಯಾಲು ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲೆ ಡಾ. ಅಪರ್ಣಾ ಸುರೇಂದ್ರ ಹೇಳಿದರು.
ಶಂಕರಪುರ ಸಮೀಪದ ಸಾಲ್ಮರದಲ್ಲಿರುವ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರದಲ್ಲಿ ನಾಗರಿಕ ಸೇವಾ ಸಮಿತಿ ಬಂಟಕಲ್ಲು ಹಾಗೂ ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಸಹಯೋಗದಲ್ಲಿ ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರೋಗ ಬಾರದಂತೆ ತಡೆಯುವುದು, ಬಂದಿರುವ ರೋಗವನ್ನು ಗುಣಪಡಿಸುವುದು ಹಾಗೂ ಆರೋಗ್ಯವರ್ಧನೆಗೆ ಪೂರಕವಾಗಿರುವ ಭಾರತೀಯ ವೈದ್ಯಕೀಯ ಪದ್ಧತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರವು ಸ್ಥಳೀಯರ ಆರೋಗ್ಯ ರಕ್ಷಣೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ಶಂಕರಪುರದ ಟ್ರಸ್ಟಿ ಹರಿದಾಸ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಳೆದ ಎರಡು ವರ್ಷಗಳಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರದಲ್ಲಿರುವ ಆರೋಗ್ಯ ಸೇವಾ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಲಕ್ಷ್ಮೀಶ ಉಪಾಧ್ಯಾಯ ಅವರು ಚಿಕಿತ್ಸಾಲಯದಲ್ಲಿ ಲಭ್ಯವಿರುವ ವಿವಿಧ ಆರೋಗ್ಯ ಸೇವೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಉಪಾಧ್ಯಕ್ಷ ಮಾಧವ ಕಾಮತ್, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಉಪಾಧ್ಯಕ್ಷೆ ಅಸುಂತಾ ಡಿಸೋಜಾ ಶುಭ ಹಾರೈಸಿದರು. ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಡಾ. ರಮೇಶ್ ಮಿತ್ತಾಂತಾಯ ಸ್ವಾಗತಿಸಿದರು. ನಾಗವೇಣಿ ಧನ್ಯವಾದ ಸಲ್ಲಿಸಿದರು. ಜ್ಯೋತಿ ಕೆ.ವಿ. ನಿರೂಪಿಸಿದರು.
ನಂತರ ನುರಿತ ವೈದ್ಯರಿಂದ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅಗತ್ಯವಿರುವವರಿಗೆ ಔಷಧಿಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು.
80% ಕಾಯಿಲೆಗಳಿಗೆ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಶಾಶ್ವತ ಪರಿಹಾರ: ಡಾ. ಅಪರ್ಣಾ ಸುರೇಂದ್ರ
RELATED ARTICLES

