ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಲಿತ ಚಳವಳಿಯ ಸ್ಥಾಪಕ ಮುಖಂಡರು, ಹಿರಿಯ ದಲಿತ ನಾಯಕರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಜನ ಚಳವಳಿಗಳ ಸಹಭಾಗಿಗಳು, ಮಾರ್ಗದರ್ಶಕರೂ ಆಗಿದ್ದ ಎಂ ದೇವದಾಸ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಪ್ರಾರಂಭಗೊಂಡಾಗ ಕರಾವಳಿ ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಪ್ರಾರಂಭಿಸಲು ಎಂ ದೇವದಾಸ್ ಬಹಳಷ್ಟು ಶ್ರಮ ವಹಿಸಿದ್ದರು. ಜಿಲ್ಲೆಯಾದ್ಯಂತ ಸಂಘಟನೆ ಕಟ್ಟಲು ಓಡಾಡಿದ್ದರು. ದಲಿತ ಸಮುದಾಯದ ನಡುವೆ ವೈಚಾರಿಕ ಪ್ರಜ್ಞೆ, ಸ್ವಾಭಿಮಾನ ಮೂಡಿಸಲು ಬಹಳಷ್ಟು ಶ್ರಮಿಸಿದ್ದರು. ಮಂಗಳೂರು ಭಾಗದಲ್ಲಿ ಎಡಪಂಥೀಯ, ವೈಚಾರಿಕ ಸಂಘಟನೆಗಳ ಜೊತೆ ಸೇರಿ ಹಲವು ಹೋರಾಟಗಳು, ಪ್ರತಿಭಟನೆಗಳನ್ನು ಸಂಘಟಿಸಿದ್ದರು. ಸಮಾನ ಮನಸ್ಕರ ವೇದಿಕೆಗಳು, ಜಂಟಿ ಹೋರಾಟಗಳನ್ನು ಸಂಘಟಿಸುವುದರಲ್ಲಿ ದೇವದಾಸ್ ಅವರು ಕೊಡುಗೆ ನೀಡಿದ್ದರು. ಹೊಸ ತಲೆಮಾರಿನ ಕಾರ್ಯಕರ್ತರಿಗೆ ಪ್ರೇರಣೆಯಾಗಿದ್ದರು.
ಜನ ಚಳವಳಿಗಳು ಸವಾಲು ಎದುರಿಸುತ್ತಿರುವ, ಕೋಮುವಾದದ ಅಪಾಯ ಹೆಚ್ಚುತ್ತಿರುವ ಇಂತಹ ಸಂದರ್ಭದಲ್ಲಿ ಸೈದ್ದಾಂತಿಕ ಬದ್ದತೆ ಹೊಂದಿದ್ದ ಎಂ ದೇವದಾಸ್ ಅವರ ನಿರ್ಗಮನ ಚಳವಳಿಗಳಿಗೆ ಅಪಾರ ನಷ್ಟ ಉಂಟು ಮಾಡಿದೆ. ಅವರ ಅಗಲಿಕೆಗೆ ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಭಾವಪೂರ್ಣ ಸಂತಾಪಗಳನ್ನು ಸಲ್ಲಿಸುತ್ತದೆ.

