ಕಡಬ ಸಮುದಾಯ ಆರೋಗ್ಯ ಕೇಂದ್ರವನ್ನು ಸಮಗ್ರ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಐದು ಕೋಟಿ ರೂ ಅನುದಾನಕ್ಕೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಮಂಗಳವಾರ ಸಂಜೆ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲಿನ ಡಯಾಲಿಸಿಸ್ ಕೇಂದ್ರದ ಸಮಸ್ಯೆಯನ್ನು ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾನಾಡಿದರು.
ನಮ್ಮ ಜಿಲ್ಲೆಯವರಾದ, ಕಡಬದ ಸಂಬoಧ ಹೊಂದಿರುವ ಯು.ಟಿ ಖಾದರ್ ಅವರು ಆರೋಗ್ಯ ಸಚಿವರಾಗಿರುವುದರಿಂದ ಮತ್ತು ಕಡಬದ ಬಗ್ಗೆ ಅವರಿಗೆ ವಿಶೇಷ ಕಾಳಜಿ ಇರುವುದರಿಂದ ಅವರ ಮುಖಾಂತರ ಸರಕಾರದಿಂದ ರೂ ಐದು ಕೋಟಿಯಷ್ಟು ವಿಶೇಷ ಅನುದಾನ ತಂದು ಸಮುದಾಯ ಕೇಂದ್ರವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.

ಕಡಬ ತಾಲೂಕಾಗಿ ಪರಿವರ್ತನೆಯಾದರೂ ಇಲ್ಲಿನ ಕಡಬ ಸಮುದಾಯ ಆರೋಗ್ಯ ಕೇಂದ್ರ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಲ್ಲ ಎನ್ನುವ ಕೊರಗು ಇದೆ, ನಾನು ಶಾಸಕಿಯಾದಾಗಿನಿಂದ ಈ ಬಗ್ಗೆ ಸಾಕಷ್ಟು ಬಾರಿ ಸರಕಾರದ ಗಮನ ಸೆಳೆದಿದ್ದೇನೆ, ಮನವಿ ಸಲ್ಲಿಸಿದ್ದೇನೆ, ಮಾತ್ರವಲ್ಲ ವಿಧಾನ ಸಭಾ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಸಂಬoಧಪಟ್ಟ ಸಚಿವರ ಗಮನ ಸೆಳೆದಿದ್ದೇನೆ, ಇನ್ನೂ ಪ್ರಯತ್ನ ನಿಲ್ಲಿಸುವುದಿಲ್ಲ ಎಂದು ಹೇಳಿದ ಶಾಸಕಿ ಆಸ್ಪತ್ರೆಯಲ್ಲಿ ಡಯಾಲಿಸ್ ಕೇಂದ್ರ ನಡೆಸಲು ಕೊಠಡಿಯ ಕೊರತೆ ಇದೆ, ಪ್ರಸ್ತುತ ಮೀಟಿಂಗ್ ಹಾಲ್‌ನಲ್ಲಿ ಡಯಾಲಿಸಿಸ್ ಕೇಂದ್ರ ನಡೆಯುತ್ತಿದ್ದು, ಅಲ್ಲಿ ಈಗ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ರ‍್ಯಾಯವಾಗಿ ಇಲ್ಲಿನ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಅಲ್ಲಿ ಸುಮಾರು ಎರಡು ಕೋಟಿ ರೂನಲ್ಲಿ ಕಟ್ಟಡ ನಿರ್ಮಿಸಲು ಉದ್ಧೇಶಿಸಲಾಗಿದೆ. ಇನ್ಫೋಸಿಸ್ ಅಥವಾ ಎಮ್‌ಆರ್‌ಪಿಎಲ್‌ನ ಸಿಎಸ್‌ಆರ್ ನಿಧಿಯಿಂದ ವಿಶೇಷ ಅನುದಾನ ತಂದು ನೂತನ ಕಟ್ಟಡ ನಿರ್ಮಾಣ ಮಾಡಿ ಅದಕ್ಕೆ ಡಯಾಲಿಸಿಸ್ ಕೇಂದ್ರವನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಹಳೆಯ ಕಟ್ಟಡ ತೆರವಿಗೆ ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆಯನ್ನು ಶೀಘ್ರವಾಗಿ ಮುಗಿಸಿ ಒಂದು ವರ್ಷದೊಳಗೆ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್, ದಂತ ವೈದ್ಯೆ ಡಾಕ್ಟರ್ ಪದ್ಮಶ್ರೀ ಪುತ್ರನ್,
ಆಯುಷ್ ವೈದ್ಯೆ ಡಾಕ್ಟರ್ ಅಶ್ವಧಿ ಮರಿಯ ಜಾರ್ಜ್,ಸೂಪರಿಟೆಂಡೆoಟ್ ಸುನಿಲ್, ಲೋಕೋಪಯೋಗಿ ಇಲಾಖಾ ಇಂಜಿನಿಯರ್‌ಗಳಾದ ಪರಮೇಶ್ವರ ಪಿ., ಪೂವಯ್ಯ, ಬಿಜೆಪಿ ಮುಖಂಡರಾದ ರಾಕೇಶ್ ರೈ ಕೆಡೆಂಜಿ, ಚಂದ್ರಶೇಖರ ಹಳೆನೂಜಿ, ಅಶೋಕ್ ಕುಮಾರ್ ಪಿ., ಶಿವಪ್ರಸಾದ್ ರೈ ಮೈಲೇರಿ, ಸತೀಶ್ ಕರ್ಮೆಣ, ಮೋಹನ ಗೌಡ ಕೆರೆಕ್ಕೋಡಿ, ಕೇಶವ ಬೇರಿಕೆ, ಕಡಬ ಪಟ್ಟಣ ಪಂಚಾಯಿತಿ ಸದಸ್ಯೆ ಅಕ್ಷತಾ ಬಾಲಕೃಷ್ಣ ಹಾಗೂ ಆಸ್ಪತ್ರೆಯ ಸಿಬಂದಿ ವರ್ಗ ಉಪಸ್ಥಿತರಿದ್ದರು.


