HomeFresh Newsಮಂಗಳೂರು ನಗರ ಪೊಲೀಸ್ ವತಿಯಿಂದ ಸುಮಾರು ₹82 ಕೋಟಿ ಮೌಲ್ಯದ ಮಾದಕ ವಸ್ತುಗಳ ನಾಶ

ಮಂಗಳೂರು ನಗರ ಪೊಲೀಸ್ ವತಿಯಿಂದ ಸುಮಾರು ₹82 ಕೋಟಿ ಮೌಲ್ಯದ ಮಾದಕ ವಸ್ತುಗಳ ನಾಶ

ಮಂಗಳೂರು ನಗರ ಪೊಲೀಸ್ ವತಿಯಿಂದ ಸುಮಾರು 82 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಬುಧವಾರ ನ್ಯಾಯಾಲಯದ ಅನುಮತಿಯೊಂದಿಗೆ ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ನಾಶಪಡಿಸಲಾಯಿತು.

2026ನೇ ಸಾಲಿನಲ್ಲಿ ಇದುವರೆಗೆ 87 ಎನ್ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿ 157 ಪೆಡ್ಲರ್ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಗಳಲ್ಲಿ 8,18,30,130 ರೂ. ಮೌಲ್ಯದ 148 ಕೆ.ಜಿ. 615 ಗ್ರಾಂ ಗಾಂಜಾ, 7 ಕೆ.ಜಿ. 165 ಗ್ರಾಂ ಎಂ.ಡಿ.ಎಂ.ಎ., 1 ಕೆ.ಜಿ. 705 ಗ್ರಾಂ ಹೈಡ್ರೋ ವೀಡ್ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ಅವಧಿಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 463 ಮಂದಿಯ ವಿರುದ್ಧ 356 ಪ್ರಕರಣಗಳನ್ನು ದಾಖಲಿಸಲಾಗಿದೆ.

ಮಂಗಳೂರು ನಗರದ ಮುಲ್ಕಿಯ ಕೊಲ್ನಾಡು ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ Ramky Energy and Environment Ltd. (Re Sustainability Healthcare Solutions Ltd.) ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ 16 ಪೊಲೀಸ್ ಠಾಣೆಗಳ 59 ಎನ್ಡಿಪಿಎಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಡ್ರಗ್ ಡಿಸ್ಪೋಸಲ್ ಕಮಿಟಿ ಸಮಕ್ಷಮ ನಾಶಪಡಿಸಲಾಯಿತು.

ನಾಶಪಡಿಸಲಾದ ಮಾದಕ ವಸ್ತುಗಳಲ್ಲಿ 450 ಕೆ.ಜಿ. ಗಾಂಜಾ, 43 ಕೆ.ಜಿ. 260 ಗ್ರಾಂ ಎಂ.ಡಿ.ಎಂ.ಎ., 80 ಗ್ರಾಂ ಚರಸ್, 880 ಗ್ರಾಂ ಹೈಡ್ರೋ ವೀಡ್ ಗಾಂಜಾ ಹಾಗೂ 1 ಕೆ.ಜಿ. 200 ಗ್ರಾಂ ಭಾಂಗ್ ಸೇರಿದ್ದು, ಒಟ್ಟಾರೆ ಸುಮಾರು 82 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸುಟ್ಟು ವಿಲೇವಾರಿ ಮಾಡಲಾಯಿತು.

ನಾಶಪಡಿಸಲಾದ ಮಾದಕ ವಸ್ತುಗಳಲ್ಲಿ ಪ್ರಮುಖವಾಗಿ 2024ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಸುಮಾರು 75 ಕೋಟಿ ರೂ. ಮೌಲ್ಯದ 37 ಕೆ.ಜಿ. ಎಂ.ಡಿ.ಎಂ.ಎ., 2025ರಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಅಂದಾಜು 4.47 ಕೋಟಿ ರೂ. ಮೌಲ್ಯದ ಸುಮಾರು 4 ಕೆ.ಜಿ. ಎಂ.ಡಿ.ಎಂ.ಎ., ಕೊಣಾಜೆ ಪೊಲೀಸ್ ಠಾಣೆಯ ಸುಮಾರು 20 ಲಕ್ಷ ರೂ. ಮೌಲ್ಯದ 106 ಕೆ.ಜಿ. ಗಾಂಜಾ ಹಾಗೂ ಮೂಡಬಿದ್ರೆ ಪೊಲೀಸ್ ಠಾಣೆಯ ಸುಮಾರು 36 ಲಕ್ಷ ರೂ ಮೌಲ್ಯದ 111 ಕೆ.ಜಿ. ಗಾಂಜಾ ಸೇರಿವೆ.

ಸಾರ್ವಜನಿಕರಿಗೆ ಮಾದಕ ವಸ್ತುಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಪೊಲೀಸ್ ಇಲಾಖೆಯಿಂದ ಸೃಜನೆ ಮಾಡಲಾಗಿರುವ ಕ್ಯೂಆರ್ ಕೋಡ್ ಮೂಲಕ ಅಥವಾ ಪೊಲೀಸ್ ಕಂಟ್ರೋಲ್ ರೂಮ್ 112 / 9480802321ಗೆ ಮಾಹಿತಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments