ಮಂಗಳೂರು:ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ, ಆಕಾಶವಾಣಿಯ ’ಎ’ ಗ್ರೇಡ್ ಕಲಾವಿದ ಹಾಗೂ ಪ್ರಖ್ಯಾತ ಕ್ರಿಕೆಟಿಗ ಜೆ. ಉತ್ತಮ್ ಕುಮಾರ್ ಕೊಡಿಯಾಲ್ ಬೈಲ್ ಅವರು ನಿಧನರಾಗಿದ್ದಾರೆ.
ಉತ್ತಮ್ ಕುಮಾರ್ ಅವರು ಹುಬ್ಬಳ್ಳಿಯ ಪ್ರಸಿದ್ಧ ಗುರುಗಳಾದ ಎನ್. ಜಿ. ಮೋಡಕ್ ಹಾಗೂ ಶ್ರೀಪತಿ ಪಾಡಿಗಾರ್ ಅವರ ಶಿಷ್ಯರಾದ ತಮ್ಮ ಸಹೋದರ ಜೆ. ಚಂದ್ರಕಾಂತ್ ಅವರಿಂದ ಉತ್ತಮ್ ಕುಮಾರ್ ಅವರು ಆರಂಭಿಕ ಸಂಗೀತ ಅಭ್ಯಾಸ ಮಾಡಿದ್ದರು. ನಂತರ ಹೊನ್ನಾವರದ ಡಾ. ಅಶೋಕ್ ಹುಗ್ಗಣ್ಣನವರ್ ಅವರ ಮಾರ್ಗದರ್ಶನದಲ್ಲಿ ಸಂಗೀತ ಕಲಿವು ಮುಂದುವರಿಸಿದರು. ದಾಸರ ಪದಗಳು, ಶಾಸ್ತ್ರೀಯ ಗಾಯನ ಹಾಗೂ ಮರಾಠಿ ಅಭಂಗ ಹಾಡುಗಾರಿಕೆಯಲ್ಲಿ ವಿಶಿಷ್ಟ ಶೈಲಿ ಹೊಂದಿದ್ದ ಇವರು ತಮ್ಮ ಅದ್ಭುತ ಕಂಠಸಿರಿಯಿಂದ ಸಹಸ್ರಾರು ಅಭಿಮಾನಿಗಳನ್ನು ರಂಜಿಸಿದ್ದರು. ಅನೇಕ ಧ್ವನಿಸುರುಳಿಗಳ ಮೂಲಕವೂ ಇವರ ಕಂಠಸಿರಿ ಮನೆಮಾತಾಗಿತ್ತು.
ಇದಲ್ಲದೆ ’ಕಾಂತ್ ವಿಶ್ವನಾಥ್ ಸಂಗೀತ ಅಕಾಡೆಮಿ’ಯ ಮೂಲಕ ಅನೇಕ ಉದಯೋನ್ಮುಖ ಕಲಾವಿದರಿಗೆ ಸಂಗೀತ ಶಿಕ್ಷಣ ನೀಡಿದ್ದ ಇವರು, ದೇಶ-ವಿದೇಶಗಳಲ್ಲಿ ಅಪಾರ ಸಂಗೀತ ಪ್ರೇಮಿಗಳನ್ನು ಸಂಪಾದಿಸಿದ್ದರು. ಸ್ವತಃ ಉತ್ತಮ ತಬಲಾ ವಾದಕರಾಗಿದ್ದ ಇವರು ರವಿ ತಳವಾರ್ ಅವರಿಂದ ಶಾಸ್ತ್ರೀಯ ತಬಲಾ ವಾದನ ಕಲಿತಿದ್ದರು.
ಇವರ ಸಂಗೀತ ಕಛೇರಿಗಳಿಗೆ ದೇಶದ ಪ್ರಖ್ಯಾತ ಹಾರ್ಮೋನಿಯಂ ಹಾಗೂ ತಬಲಾ ವಾದಕರಾದ ಪಂಡಿತ್ ರವೀಂದ್ರ ಕಾಟೋಟಿ, ಪಂಡಿತ್ ಶ್ರೀರಾಮ್ ಭಟ್, ನರೇಂದ್ರ ನಾಯಕ್, ಪಂಡಿತ್ ಮೌನೇಶ್ ಕುಮಾರ್ ಚಾವಣಿ, ಸತೀಶ್ ಕೊಳ್ಳಿ, ಪಂಡಿತ್ ರಾಜೇಂದ್ರ ನಾಕೋಡ್, ಪಂಡಿತ್ ಅಲ್ಲಮಪ್ರಭು ಕಡಕೋಳ, ಪಂಡಿತ್ ಶ್ರೀಧರ ಮಾಂಡ್ರೆ, ಪಂಡಿತ್ ಗೋಪಾಲ್ ಕೃಷ್ಣ ಹೆಗಡೆ, ಪಂಡಿತ್ ವ್ಯಾಸಮೂರ್ತಿ ಕಟ್ಟಿ, ಪಂಡಿತ್ ಉದಯರಾಜ್ ಕರ್ಪೂರ್, ಪಂಡಿತ್ ಗುರುಮೂರ್ತಿ ವೈದ್ಯ, ಭಾರವಿ ದೇರಾಜೆ, ರಾಜೇಶ್ ಭಾಗವತ್, ಶ್ರೀವತ್ಸ ಜೋಶಿ, ಹಾಗೂ ಸಂತೋಷ್ ಕುಮಾರ್ ಮುಂತಾದ ದಿಗ್ಗಜ ಕಲಾವಿದರು ಸಾಥ್ ನೀಡಿದ್ದರು.
ಸಂಗೀತದ ಜೊತೆಗೆ ಕ್ರೀಡಾರಂಗದಲ್ಲೂ ಮುಂಚೂಣಿಯಲ್ಲಿದ್ದ ಉತ್ತಮ್ ಕುಮಾರ್, ಸಂತ ಅಲೋಶಿಯಸ್ ಕಾಲೇಜು ತಂಡದ ಸವ್ಯಾಸಚಿ ಆಲ್ ರೌಂಡರ್ ಆಟಗಾರರಾಗಿದ್ದರು. ೧೯೯೦ರ ದಶಕದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ’ಶತಕವೀರ’ ಬಿರುದಿಗೆ ಭಾಜನರಾಗಿದ್ದರು.
ಆಲ್ ಇಂಡಿಯಾ ಅಂತರ್ ವಿಶ್ವವಿದ್ಯಾಲಯ ಟೂರ್ನಮೆಂಟ್‌ನ ’ರೋಹಿಂಗ್ಟನ್ ಬ್ಯಾರಿಯಾ’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ತಂಡವನ್ನು ಸೆಮಿಫೈನಲ್ ಹಂತಕ್ಕೇರಿಸಿದ್ದರು. ಆ ಟೂರ್ನಿಯಲ್ಲಿ ’ಅತ್ಯುತ್ತಮ ಆಲ್ ರೌಂಡರ್’ ಪ್ರಶಸ್ತಿ ಪಡೆಯುವ ಮೂಲಕ ಮಂಗಳೂರು ವಿವಿಯ ಇತಿಹಾಸದಲ್ಲೇ ಯಾರೂ ಮಾಡದ ಅನನ್ಯ ದಾಖಲೆ ಬರೆದಿದ್ದರು.
ಸಂಗೀತ ಮತ್ತು ಕ್ರೀಡೆ – ಎರಡೂ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಜೆ. ಉತ್ತಮ್ ಕುಮಾರ್ ಅವರ ಅಗಲಿಕೆಗೆ ಅಭಿಮಾನಿಗಳು ಹಾಗೂ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

