ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸೋಮವಾರದಿಂದ (ಆ.10) ಹಂಗಾಮಿ ವಿಧಾನಸಭಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಆಗಸ್ಟ್ 13ರಿಂದ 27ರವರೆಗೆ 10 ದಿನಗಳ ಕಾಲ ನಡೆಯಲಿರುವ ಮಳೆಗಾಲದ ವಿಧಾನ ಸಭೆ ಅಧಿವೇಶನವನ್ನು ಅವರು ನಡೆಸಿಕೊಡಲಿದ್ದು, ಸೋಮವಾರ ವಿಧಾನಸಭಾ ಅಧ್ಯಕ್ಷರ ಕಚೇರಿಗೆ ತೆರಳಿ ಕಾರ್ಯ ಆರಂಭಿಸಲಿದ್ದಾರೆ.
ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆಗಳು, ವಿಧೇಯಕಗಳ ಮಂಡನೆ, ನೂತನ ವಿಧಾನಸಭಾ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ಪ್ರಸ್ತಾವ , ಅರ್ಧ ಗಂಟೆ ಕಾಲಾವಧಿ ಚರ್ಚೆ, ಶೂನ್ಯ ವೇಳೆ, ನಿಯಮ 69 ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯಗಳ ಬಗ್ಗೆ ಅಲ್ಪ ಕಾಲಾವಧಿ ಚರ್ಚೆ, ಅಧಿಕೃತ ನಿರ್ಣಯಗಳು, ವರದಿಗಳನ್ನು ಒಪ್ಪಿಸುವುದು ಸೇರಿದಂತೆ ಕಾರ್ಯಕಲಾಪಗಳ ಪಟ್ಟಿ ಸಿದ್ಧಪಡಿಸಲು ಜಯಚಂದ್ರ ಗಮನ ವಹಿಸಲಿದ್ದಾರೆ.
ಮುಂಗಾರು ಮಳೆ ಸಕಾಲಕ್ಕೆ ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ, ತಮಿಳುನಾಡಿಗೆ ಕಾವೇರಿ ನೀರು ಹರಿಸುವಿಕೆ, ಬಿಡದಿ ಟೌನ್ ಷಿಪ್ ವಿಷಯಗಳು ಸದನಗಳಲ್ಲಿ ತೀವ್ರ ಚರ್ಚೆಯಾಗುವ ನಿರೀಕ್ಷೆಗಳಿವೆ.
16ನೇ ವಿಧಾನಸಭೆಯ ಎಂಟನೇ ಅಧಿವೇಶನವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನ ಸೋಮವಾರದಿಂದ ಆರಂಭಿಸುವುದಾಗಿ ಟಿ.ಬಿ ಜಯಚಂದ್ರ ತಿಳಿಸಿದ್ದಾರೆ.


