HomeFresh Newsಹೆಜಮಾಡಿ ಬಿಲ್ಲವರ ಸಂಘದ ವಾರ್ಷಿಕ ಮಹಾಸಭೆ,35 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ; ದಾನಿಗಳಿಗೆ ಸನ್ಮಾನ

ಹೆಜಮಾಡಿ ಬಿಲ್ಲವರ ಸಂಘದ ವಾರ್ಷಿಕ ಮಹಾಸಭೆ,35 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ; ದಾನಿಗಳಿಗೆ ಸನ್ಮಾನ

ಹೆಜಮಾಡಿ: ಹೆಜಮಾಡಿ ಬಿಲ್ಲವರ ಸಂಘದ 2025–26ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ಭಾನುವಾರ ಹೆಜಮಾಡಿ ಬಿಲ್ಲವರ ಸಂಘದ ಜಯ ಸಿ. ಸುವರ್ಣ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ 35 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಯಾವುದೇ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಂಘವು ನಿರಂತರವಾಗಿ ವಿದ್ಯಾರ್ಥಿವೇತನ ನೀಡುತ್ತಿದೆ ಎಂದು ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ ತಿಳಿಸಿದರು.
ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣವನ್ನು ಪಡೆಯಬೇಕು. ಮುಂದಿನ ದಿನಗಳಲ್ಲಿ ಸಮಾಜ ಹಾಗೂ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಸಂಘದ ಆಶಯವನ್ನು ಸಾಕಾರಗೊಳಿಸಬೇಕು ಎಂದು ಅವರು ಕರೆ ನೀಡಿದರು.
ವಾಸುದೇವ ಆರ್. ಕೋಟ್ಯಾನ್ ಅವರ ಮಾರ್ಗದರ್ಶನದಲ್ಲಿ ಬೆಳೆದಿರುವ ಹೆಜಮಾಡಿ ಬಿಲ್ಲವರ ಸಂಘವು ಶಿಕ್ಷಣ, ಸಮಾಜಸೇವೆ ಹಾಗೂ ಯುವಜನರ ಪ್ರೋತ್ಸಾಹ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿಯೂ ಸಂಘದ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಮೋಹನ್‌ದಾಸ್ ಹೆಜಮಾಡಿ ಹೇಳಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘದ ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಆರ್ಥಿಕ ಸಹಕಾರ ನೀಡಿದ ದಾನಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ದಾನಿಗಳ ಸೇವಾ ಮನೋಭಾವವನ್ನು ಗಣ್ಯರು ಅಭಿನಂದಿಸಿದರು.
ಸಭೆಯಲ್ಲಿ 2025–26ನೇ ಸಾಲಿನ ಸಂಘದ ವಿವಿಧ ಚಟುವಟಿಕೆಗಳು, ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ 2025–26ನೇ ಸಾಲಿನ ಸಂಘದ ಲೆಕ್ಕಪರಿಶೋಧಕರಾಗಿ ಸಿ.ಎ. ರಾಘವೇಂದ್ರ ಅವರನ್ನು ನೇಮಕ ಮಾಡಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಹೆಜಮಾಡಿ, ಸುಧೀರ್ ಕರ್ಕೇರ, ಕೋಡಿಕರೆ ಅಧ್ಯಕ್ಷ ಸಂಜೀವ ಜಿ. ಕೋಟ್ಯಾನ್, ಕೋಶಾಧಿಕಾರಿ ಲೀಲೇಶ್ ಸುವರ್ಣ, ಯುವವಾಹಿನಿ ಅಧ್ಯಕ್ಷ ಪ್ರಥಮೇಶ್ ಪಿ. ಬಂಗೇರ, ಬಿರ್ವೆರ್ ಬ್ರದರ್ಸ್ ಅಧ್ಯಕ್ಷ ಗುರುಪ್ರಸಾದ್, ಗುರುಮಂದಿರದ ಅಧ್ಯಕ್ಷ ಹರೀಶ್ ಶಾಂತಿ, ಮಾಜಿ ಅಧ್ಯಕ್ಷ ಲೋಕೇಶ್ ಅಮೀನ್ ಹಾಗೂ ದೊಂಬ ಕೆ. ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮಹಿಳಾ ಮಂಡಳಿ ಸದಸ್ಯೆ ರಕ್ಷಾ ಪ್ರಾರ್ಥನೆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಭೋದ್ ಚಂದ್ರ ಹೆಜಮಾಡಿ ಸ್ವಾಗತಿಸಿ, ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು.
ಸಂಘದ ಮಾಜಿ ಅಧ್ಯಕ್ಷರಾದ ಜಿನರಾಜ್ ಬಂಗೇರ, ಸುಭಾಷ್ ಜಿ. ಸಾಲ್ಯಾನ್ ಹಾಗೂ ವಿಶ್ವನಾಥ್ ಕೊಪ್ಪಳ ಅವರು ಮಾತನಾಡಿ, ಸಂಘದ ಶೈಕ್ಷಣಿಕ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ಶುಭ ಹಾರೈಸಿದರು. ಮಹಿಳಾ ಮಂಡಳಿ ಅಧ್ಯಕ್ಷೆ ಲಾವಣ್ಯ ಪ್ರಭೋದ್ ಅವರು ಸಂಘದ ಚಟುವಟಿಕೆಗಳಲ್ಲಿ ಮಹಿಳಾ ಮಂಡಳಿಯ ಸಹಕಾರ ಹಾಗೂ ಮುಂದಿನ ಕಾರ್ಯಕ್ರಮಗಳ ಕುರಿತು ಮಾತನಾಡಿದರು.
ಶಿವರಾಮ್ ಜಿ. ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕೋಶಾಧಿಕಾರಿ ಲೀಲೇಶ್ ಸುವರ್ಣ ವಂದನಾರ್ಪಣೆ ಸಲ್ಲಿಸಿದರು.
ಸಂಘದ ಪದಾಧಿಕಾರಿಗಳು, ಮಾಜಿ ಪದಾಧಿಕಾರಿಗಳು, ಮಹಿಳಾ ಮಂಡಳಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments