ಪಡುಬಿದ್ರಿ/ಕುತ್ಯಾರು: ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಸಹಯೋಗದೊಂದಿಗೆ ಕುತ್ಯಾರಿನ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ನಲ್ಲಿ ಆಯೋಜಿಸಲಾಗಿದ್ದ 18 ನೇ ವರ್ಷದ ಜಿಲ್ಲಾ ಮಟ್ಟದ ವಿಜ್ಞಾನ ಮೇಳ, ಗಣಿತ-ವೇದಗಣಿತ ಹಾಗೂ ಸಂಸ್ಕೃತಿ ಜ್ಞಾನ ಮಹೋತ್ಸವ 2026ರ ಸ್ಪರ್ಧೆಗಳು ಜರುಗಿದವು.

ವಿದ್ಯಾಭಾರತಿ ಸಂಲಗ್ನಗೊಂಡ 5 ಶಾಲೆಗಳಿಂದ ಆಗಮಿಸಿದ ಸುಮಾರು 100 ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತ ಮಾದರಿ ಪ್ರದರ್ಶನ, ರಸಪ್ರಶ್ನೆ, ವಿಜ್ಞಾನ ಹಾಗೂ ಗಣಿತ ಪ್ರಯೋಗಗಳು, ಸಂಸ್ಕೃತಿ ಜ್ಞಾನ ಪರಿಚಯ ರಸಪ್ರಶ್ನೆ, ಆಶುಭಾಷಣ ಮತ್ತು ಮೂರ್ತಿಕಲಾ ಸ್ಪರ್ಧೆಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಅಸೆಟ್ (ASSET) ಸಂಸ್ಥೆಯ ಕಾರ್ಯದರ್ಶಿ ಗುರುರಾಜ ಆಚಾರ್ಯ ಮಾತನಾಡಿ, ಇಂತಹ ವಿಜ್ಞಾನ ಮತ್ತು ಗಣಿತ ಮೇಳಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಸೂಕ್ತ ವೇದಿಕೆಯಾಗಿದೆ ಎಂದರು.

ವಿದ್ಯಾಭಾರತಿ ಕರ್ನಾಟಕದ ಅಧ್ಯಕ್ಷರಾದ ಪಾಂಡುರಂಗ ಪೈ ಸಿದ್ಧಾಪುರ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು, ಗಣಿತದ ಬಗ್ಗೆ ಆಸಕ್ತಿ ಮೂಡಿಸಲು ಮತ್ತು ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ವಿದ್ಯಾಭಾರತಿಯ ಈ ಶೈಕ್ಷಣಿಕ ಕಾರ್ಯಕ್ರಮಗಳು ಅತ್ಯಂತ ಶ್ಲಾಘನೀಯ ಎಂದು ತಿಳಿಸಿದರು.
ವಿದ್ಯಾಭಾರತಿ ಕರ್ನಾಟಕದ ಕಾರ್ಯದರ್ಶಿ ಶ್ರೀ ಮಹೇಶ್ ಹೈಕಾಡಿ ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನು ಆಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಮಟ್ಟದ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಸೆಪ್ಟೆಂಬರ್ 4, 5 ಮತ್ತು 6, 2026 ರಂದು ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ‘ಬಾಲಭಾರತಿ ಕೇಂದ್ರೀಯ ವಿದ್ಯಾಲಯ’ದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ವಿಜ್ಞಾನ ಪ್ರಮುಖ್ ಪ್ರಶ್ಮಿತಾ, ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ವಿವೇಕ ಆಚಾರ್ಯ, ಸದಸ್ಯರಾದ ಸುಂದರ್ ಆಚಾರ್ಯ ಮರೋಳಿ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅನಿತಾ ಉಪಸ್ಥಿತರಿದ್ದರು. ಸ್ಪರ್ಧಾ ತೀರ್ಪುಗಾರರಾಗಿ ಶ್ರೀಮತಿ ಆಶಾ, ಸುನಿತಾ ಹೆಬ್ಬಾರ್, ರಾಜೇಂದ್ರ ಭಟ್, ಜಿತೇಂದ್ರ, ಶ್ರೀ ದಿವಾಕರ ಆಚಾರ್ಯ ഗೇರುಕಟ್ಟೆ ಸೇರಿದಂತೆ ಹಲವು ಶಿಕ್ಷಕರು ಸಹಕರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅನಿತಾ ಸ್ವಾಗತಿಸಿ, ಉಪಮುಖ್ಯ ಶಿಕ್ಷಕಿ ಶ್ರೀಮತಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಶ್ರೀಮತಿ ಅಮಿತಾ ಧನ್ಯವಾದ ಸಮರ್ಪಿಸಿದರು.

