ಮಂಗಳೂರು: ಕಣ್ಣಿನ ಗುಡ್ಡೆಯ ಕಾಯಿಲೆಯಿಂದ ಬರುವ ಅಂಧತ್ವವನ್ನು ಮುಕ್ತಗೊಳಿಸುವ ಮತ್ತು ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ, ರಾಷ್ಟ್ರೀಯ ನೇತ್ರದಾನ ಸಪ್ತಾಹದ ಅಂಗವಾಗಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಸೆಂಚುರಿ ಗ್ರೂಪ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಸೆಪ್ಟೆಂಬರ್ 5, 2026 ರಂದು ಅಪರಾಹ್ನ 3:30 ಕ್ಕೆ ನೇತ್ರದಾನ ಜಾಗೃತಿ ರ್ಯಾಲಿ (ಜಾಥಾ) ಆಯೋಜಿಸಲಾಗಿದೆ.
ರ್ಯಾಲಿ ಸಾಗುವ ಮಾರ್ಗ:
ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ಪಂಪ್ವೆಲ್ ಸರ್ಕಲ್ನಿಂದ ಹೊರಡುವ ಈ ರ್ಯಾಲಿಗೆ ಮಧ್ಯಾಹ್ನ 3:30 ಕ್ಕೆ ಚಾಲನೆ ದೊರೆಯಲಿದೆ. ಈ ಜಾಥಾವು ಉಜ್ಜೋಡಿ ಪಂಪ್ವೆಲ್ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಬಳಿ ಮುಕ್ತಾಯಗೊಳ್ಳಲಿದೆ .
ತದನಂತರ ಸಂಜೆ 4:00 ಗಂಟೆಗೆ ಆಸ್ಪತ್ರೆಯ ಆವರಣದಲ್ಲಿ ಭವ್ಯ ವೇದಿಕೆ ಕಾರ್ಯಕ್ರಮ ನಡೆಯಲಿದೆ
ಉದ್ಘಾಟನೆ ಮತ್ತು ಅತಿಥಿಗಳು:
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಸಚಿವರಾದ ಶ್ರೀ ಯು.ಟಿ. ಖಾದರ್ ಫರೀದ್ ಅವರು ರ್ಯಾಲಿಯನ್ನು ಉದ್ಘಾಟಿಸಲಿದ್ದಾರೆ . ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಭಾಗವಹಿಸಲಿದ್ದಾರೆ . ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ .
ಗೌರವಾನ್ವಿತ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಪ್ರಕಾಶ್ ಡಿ.ಎಸ್., ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ರೆ| ಫಾ| ಫೌಸ್ಟಿನ್ ಲ್ಯೂಕಾಸ್ ಲೋಬೊ ಹಾಗೂ ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ಕೆ. ಅವರು ಉಪಸ್ಥಿತರಿರಲಿದ್ದಾರೆ .
ಇನ್ನೊಬ್ಬರ ಬಾಳಿಗೆ ಬೆಳಕಾಗುವ ಈ ಮಹತ್ಕಾರ್ಯದ ಜಾಗೃತಿ ರ್ಯಾಲಿಯಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ರಶ್ಮಿ ಕೃಷ್ಣ ಪ್ರಸಾದ್, ನಿರ್ದೇಶಕರುಗಳಾದ ಡಾ. ವಿಕ್ರಮ್ ಜೈನ್, ಡಾ. ಹರೀಶ್ ಶೆಟ್ಟಿ, ಮತ್ತು ಡಾ. ಜೇಕಬ್ ಚಾಕೋ ಅವರು ಜಂಟಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ .

