HomeFresh Newsಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ರೂ.90.17 ಲಕ್ಷ ನಿವ್ವಳ ಲಾಭ; ಶೇ.15 ಡಿವಿಡೆಂಟ್ ಘೋಷಣೆ

ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ರೂ.90.17 ಲಕ್ಷ ನಿವ್ವಳ ಲಾಭ; ಶೇ.15 ಡಿವಿಡೆಂಟ್ ಘೋಷಣೆ

ಶಿರೂರು: ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ಲಿ.) ಶಿರೂರು ಇದರ ವಾರ್ಷಿಕ ಸಾಮಾನ್ಯ ಸಭೆಯು ಅ.30ರಂದು ಆಮ್ರಕಲ್ಲು ಹಿಲಿಯಾಣದ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ನಾಯ್ಕ ಶೇಡಿಕೊಡ್ಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘವು 2026ರ ಆರ್ಥಿಕ ವರ್ಷಾಂತ್ಯಕ್ಕೆ ಒಟ್ಟು ರೂ.252 ಕೋಟಿ ವ್ಯವಹಾರ ನಡೆಸಿದ್ದು, ರೂ.52 ಕೋಟಿ ಠೇವಣಿ ಹಾಗೂ ರೂ.42.32 ಕೋಟಿ ಹೊರಬಾಕಿ ಸಾಲ ಹೊಂದಿದೆ. ಲೆಕ್ಕಪರಿಶೋಧನೆಯಲ್ಲಿ ‘ಎ’ ತರಗತಿ ಪಡೆದಿರುವ ಸಂಘವು ವರದಿ ಸಾಲಿನಲ್ಲಿ ರೂ.90.17 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಪ್ರಗತಿಪರ ಕೃಷಿಕ ಹಾಗೂ ಹಿರಿಯ ಸದಸ್ಯರಾದ ಶ್ರೀ ಕುಯಿರ ನಾಯ್ಕ ಕಂಡಿಕೆ, ನೆಡೂರು, ಸಮಾಜ ಸೇವೆಗಾಗಿ ಶ್ರೀ ಬಡಿಯ ನಾಯ್ಕ ನಾಲ್ಕೂರು, ಯಕ್ಷಗಾನ ಕ್ಷೇತ್ರದಲ್ಲಿ ಚಂಡೆವಾದಕ ಶ್ರೀ ಶ್ರೀಧರ ಹಿಲಿಯಾಣ, ಶೈಕ್ಷಣಿಕ ಸಾಧನೆಗಾಗಿ ಕುಮಾರಿ ವಿಜಯಲಕ್ಷ್ಮೀ ಹಾಗೂ ಬಾಲ ಪ್ರತಿಭೆ ಮತ್ತು ಕ್ರೀಡಾ ಸಾಧನೆಗಾಗಿ ಪ್ರಥ್ವಿಕ್ ಕುಮಾರ ಮಂದಾರ್ತಿ ಅವರನ್ನು ಸನ್ಮಾನಿಸಲಾಯಿತು.

ಅಶಕ್ತ 12 ಮಂದಿ ಸದಸ್ಯರಿಗೆ ವೈದ್ಯಕೀಯ ನೆರವು ನೀಡಲಾಯಿತು. ವರದಿ ವರ್ಷದಲ್ಲಿ 114 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ, 66 ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ 8 ವಿದ್ಯಾರ್ಥಿಗಳಿಗೆ, ಒಟ್ಟು 188 ವಿದ್ಯಾರ್ಥಿಗಳಿಗೆ ಸುಮಾರು ರೂ.4.33 ಲಕ್ಷ ವಿದ್ಯಾರ್ಥಿವೇತನ ವಿತರಿಸಲಾಯಿತು.

ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನ ಗೌರವಾನ್ವಿತ ಅಧ್ಯಕ್ಷರಾದ ಸಹಕಾರಿರತ್ನ ಶ್ರೀ ಯಶಪಾಲ್ ಎ. ಸುವರ್ಣ ಅವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಶ್ರೀ ಪ್ರತಾಪ ಹೆಗ್ಡೆ ಮಾರಾಳಿ, ಕುಡುಬಿ ಸಮಾಜೋದ್ಧಾರಕ ಸಂಘದ ಅಧ್ಯಕ್ಷ ಶ್ರೀ ಪ್ರಭಾಕರ ನಾಯ್ಕ ಕಲ್ಮರ್ಗಿ, ಸಂಘದ ಉಪಾಧ್ಯಕ್ಷ ಶ್ರೀ ಸಿದ್ಧಾರ್ಥ ನಾಯ್ಕ ನರಿಕೊಡ್ಲು, ನಿರ್ದೇಶಕರಾದ ಶ್ರೀ ಎಚ್. ಬೆಳ್ಳ ನಾಯ್ಕ ಕೊಕ್ಕರ್ಣೆ, ಶ್ರೀ ಜಯಪ್ರಕಾಶ ನಾಯ್ಕ ಅಲ್ತಾರು, ಶ್ರೀ ವಸಂತ ನಾಯ್ಕ ಒಳಬೈಲ್, ಶ್ರೀ ದಿನೇಶ ನಾಯ್ಕ ಹೊರ್ಲಾಳಿ, ಶ್ರೀ ನರಸಿಂಹ ನಾಯ್ಕ ಯಡ್ತಾಡಿ, ಶ್ರೀ ಮಹಾದೇವ ನಾಯ್ಕ ಬಿಲ್ಲಾಡಿ, ಶ್ರೀಮತಿ ಲಲಿತಾ ಬಿಲ್ಲಾಡಿ ಹಾಗೂ ಶ್ರೀಮತಿ ಪಾರ್ವತಿ ಗೋಳಿಯಂಗಡಿ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಶ್ರೀ ಸಿದ್ಧಾರ್ಥ ನಾಯ್ಕ ಸ್ವಾಗತಿಸಿದರು. ನಿರ್ದೇಶಕ ಶ್ರೀ ಮಹಾದೇವ ಅವರು 2026-27ನೇ ಸಾಲಿನ ಬಜೆಟ್ ಮಂಡಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನರಸಿಂಹ ನಾಯ್ಕ ಮಂದಾರ್ತಿ ಅವರು ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಶಾಖಾ ವ್ಯವಸ್ಥಾಪಕರಾದ ಶ್ರೀ ಕೃಷ್ಣ ನಾಯ್ಕ ಮತ್ತು ಶ್ರೀ ಗಣೇಶ ಹಿಲಿಯಾಣ ಅವರು ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಶ್ರೀ ವಸಂತ ನಾಯ್ಕ ವಂದಿಸಿದರು. ಸಿಬ್ಬಂದಿ ಶ್ರೀ ವಿಘ್ನೇಶ ಕಾರ್ಯಕ್ರಮ ನಿರೂಪಿಸಿದರು.

ಸಹಕಾರ ಕ್ಷೇತ್ರಕ್ಕೆ ಹೆಮ್ಮೆಯ ಸಂಸ್ಥೆ: ಯಶಪಾಲ್ ಸುವರ್ಣ

“23 ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘವನ್ನು ಸ್ಥಾಪಿಸಿ, ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ಸಬಲೀಕರಣದ ಜೊತೆಗೆ ಶೈಕ್ಷಣಿಕ ಪ್ರೋತ್ಸಾಹ ನೀಡುತ್ತಾ, ಶಿರೂರು ಮತ್ತು ಮುದ್ದೂರಿನಲ್ಲಿ ಸ್ವಂತ ಕಟ್ಟಡಗಳನ್ನು ಹೊಂದಿ, ನಿರಂತರವಾಗಿ ಶೇ.15 ಡಿವಿಡೆಂಡ್ ನೀಡುತ್ತಾ ಬಂದಿರುವ ಶ್ರೀ ಮಲ್ಲಿಕಾರ್ಜುನ ಸಹಕಾರಿ ಸಂಘವು ಜಿಲ್ಲೆಯ ಪ್ರತಿಷ್ಠಿತ ಪತ್ತಿನ ಸಹಕಾರಿ ಸಂಘವಾಗಿ ಸತತವಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ‘ಸಾಧನ’ ಪ್ರಶಸ್ತಿ ಪಡೆಯುತ್ತಿರುವುದು ಸಹಕಾರಿ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಗ್ರಾಮೀಣ ಭಾಗದಲ್ಲಿ ಸಾವಿರಾರು ಸದಸ್ಯರು ಸಂಘದ ಮಹಾಸಭೆಯಲ್ಲಿ ಭಾಗವಹಿಸುತ್ತಿರುವುದು ಸಹಕಾರಿ ಕ್ಷೇತ್ರದ ಮೇಲೆ ಜನರು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಪ್ರತೀಕವಾಗಿದೆ,” ಎಂದು ಸಹಕಾರಿರತ್ನ ಶ್ರೀ ಯಶಪಾಲ್ ಎ. ಸುವರ್ಣ, ಅಧ್ಯಕ್ಷರು, ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್, ಉಡುಪಿ, ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments