HomeFresh Newsಶತಮಾನೋತ್ಸವ ಆಚರಿಸುತ್ತಿರುವ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಯುಕೆ ಘಟಕದ ಅಧ್ಯಕ್ಷರಾಗಿ ಚಂದ್ರಹಾಸ ಹೆಗ್ಡೆ ನೇಮಕ

ಶತಮಾನೋತ್ಸವ ಆಚರಿಸುತ್ತಿರುವ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಯುಕೆ ಘಟಕದ ಅಧ್ಯಕ್ಷರಾಗಿ ಚಂದ್ರಹಾಸ ಹೆಗ್ಡೆ ನೇಮಕ

ಮಂಗಳೂರು, ಸೆಪ್ಟೆಂಬರ್ 7, 2026: ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ತುಳುವರ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ತುಳುವ ಮಹಾಸಭೆ ಇಂಟರ್‌ನ್ಯಾಷನಲ್, ಶತಮಾನೋತ್ಸವ ಆಚರಿಸುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ ತನ್ನ ಅಂತರರಾಷ್ಟ್ರೀಯ ಸಂಘಟನಾ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಯುಕೆ ಘಟಕದ ಅಧ್ಯಕ್ಷರಾಗಿ ಶ್ರೀ ಚಂದ್ರಹಾಸ ಹೆಗ್ಡೆಯವರನ್ನು ನೇಮಕ ಮಾಡಿದೆ.

ಕಾರ್ಕಳ ತಾಲೂಕಿನ ಅತ್ತೂರು ಕಿಲ್ಲಬೆಟ್ಟು ಮೂಲದ ಶ್ರೀ ಚಂದ್ರಹಾಸ ಹೆಗ್ಡೆಯವರು ಕಂಪ್ಯೂಟರ್ ಎಂಜಿನಿಯರಿಂಗ್ ಪದವೀಧರರಾಗಿದ್ದು, ಡಿಜಿಟಲ್ ಪರಿವರ್ತನೆ, ಉತ್ಪನ್ನ ನಿರ್ವಹಣೆ, ಕೃತಕ ಬುದ್ಧಿಮತ್ತೆ (AI), ಕ್ಲೌಡ್ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ. ಕಳೆದ ಎರಡು ದಶಕಗಳಿಂದ ಲಂಡನ್‌ನಲ್ಲಿ ನೆಲೆಸಿರುವ ಅವರು ಬ್ಯಾಂಕಿಂಗ್, ಹಣಕಾಸು ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ 25 ವರ್ಷಕ್ಕೂ ಹೆಚ್ಚಿನ ವೃತ್ತಿಪರ ಅನುಭವ ಹೊಂದಿದ್ದಾರೆ.

ವೃತ್ತಿಜೀವನವನ್ನು ಭಾರತದಲ್ಲಿ ಆರಂಭಿಸಿದ ಅವರು ವಿವಿಧ ಪ್ರಮುಖ ಬ್ಯಾಂಕುಗಳಿಗೆ ಬ್ಯಾಂಕಿಂಗ್ ಸಾಫ್ಟ್‌ವೇರ್ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಯುಕೆ, ಯುರೋಪ್, ಅಮೆರಿಕ ಹಾಗೂ ದಕ್ಷಿಣ ಆಫ್ರಿಕಾದ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳ ಡಿಜಿಟಲ್ ಉತ್ಪನ್ನಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ AI ಹಾಗೂ ವ್ಯವಹಾರ ತಂತ್ರಯೋಜನಾ ಕ್ಷೇತ್ರದಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತುಳು ಸಮುದಾಯದೊಂದಿಗೆ ಸಕ್ರಿಯ ಸಂಪರ್ಕ

ವೃತ್ತಿಪರ ಕ್ಷೇತ್ರದ ಜೊತೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿರುವ ಚಂದ್ರಹಾಸ ಹೆಗ್ಡೆಯವರು ಯುಕೆನಲ್ಲಿರುವ ಕನ್ನಡ ಮತ್ತು ತುಳು ಸಮುದಾಯಗಳ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ Tulu Community UKನ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಯುಕೆ ತುಳು ಸಮುದಾಯದ ಸಂಘಟನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಕೊಡುಗೆ ನೀಡುತ್ತಿದ್ದಾರೆ.

ತುಳು ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನ, ಯುಕೆ ತುಳು ಸಮುದಾಯದೊಂದಿಗಿನ ನಿಕಟ ಸಂಪರ್ಕ, ಸಂಘಟನಾ ಅನುಭವ ಹಾಗೂ ವೃತ್ತಿಪರ ಪರಿಣತಿಯನ್ನು ಪರಿಗಣಿಸಿ ಅವರನ್ನು ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಯುಕೆ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಯುಕೆನಲ್ಲಿ ನೆಲೆಸಿರುವ ತುಳುವರನ್ನು ಸಂಘಟಿಸಿ, ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ತುಳುವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವಲ್ಲಿ ಅವರ ನಾಯಕತ್ವ ಮಹತ್ವದ ಪಾತ್ರ ವಹಿಸಲಿದೆ ಎಂಬ ವಿಶ್ವಾಸವನ್ನು ಸಂಸ್ಥೆ ವ್ಯಕ್ತಪಡಿಸಿದೆ.

ಅಂತರರಾಷ್ಟ್ರೀಯ ಅಧ್ಯಕ್ಷರಿಂದ ನೇಮಕ

ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಅವರು ಶ್ರೀ ಚಂದ್ರಹಾಸ ಹೆಗ್ಡೆಯವರನ್ನು ಯುಕೆ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀ ಶ್ರೀಹರಿನಾರಾಯಣದಾಸ ಅಸ್ರಣ್ಣ ಕಟೀಲ್, ಅಧ್ಯಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ಶ್ರೀ ವಸಂತ ರೈ ಕುತ್ತೇತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ, ಹಾಗೂ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಶ್ರೀ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಮತ್ತು ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ.ಆರ್. ಆಳ್ವ ಅವರು ಅಭಿನಂದಿಸಿ, ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದ್ದಾರೆ.

ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಶತಮಾನೋತ್ಸವದ ಈ ಐತಿಹಾಸಿಕ ಸಂದರ್ಭದಲ್ಲಿ ಯುಕೆ ಘಟಕಕ್ಕೆ ದೊರೆತಿರುವ ಹೊಸ ನಾಯಕತ್ವವು ಜಾಗತಿಕ ಮಟ್ಟದಲ್ಲಿ ತುಳು ಸಂಘಟನೆ, ತುಳು ಭಾಷೆ ಮತ್ತು ಸಂಸ್ಕೃತಿಯ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments