ಪುತ್ತೂರು: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸಿ ದಲಿತ ಮಾತ್ರವಲ್ಲದೆ ಬುದ್ಧ, ಬಸವಣ್ಣ ಇವರ ಬಗ್ಗೆ ನಿಂದನಾತ್ಮಕ ಹೇಳಿಕೆಯನ್ನು ನೀಡಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಮಂಡ್ಯ ಜಿಲ್ಲೆ ಕೆ. ಆರ್ ಪೇಟೆ ತಾಲೂಕಿನ ವೇದಮೂರ್ತಿ ಎಂಬ ವ್ಯಕ್ತಿ ವಿರುದ್ಧ ಪುತ್ತೂರು ಕಾಂಗ್ರೆಸ್ ಎಸ್ಸಿ ಘಟಕದಿಂದ ದೂರು ನೀಡಲಾಗಿದೆ. ಮಂಡ್ಯ ಜಿಲ್ಲೆ ಕೆ. ಆರ್ ಪೇಟೆ ತಾಲೂಕಿನ ವೇದಮೂರ್ತಿ ಎಂಬವರು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಾಚ್ಯವಾಗಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುತ್ತಾರೆ. ಅವರ ನಿಂದನಾತ್ಮಕ ಹೇಳಿಕೆಯಿಂದ ಅನುಯಾಯಿಗಳಾದ ನಮಗೆ ಮಾನಸಿಕವಾಗಿ ಅಘಾತವಾಗಿದೆ. ಈ ಹೇಳಿಕೆಯಿಂದಾಗಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗುವ ಸಾದ್ಯತೆ ಇದೆ. ಹಾಗಾಗಿ ತಕ್ಷಣ ಅಂಬೇಡ್ಕರ್ ಅವರನ್ನು ನಿಂಧಿಸಿದ ವ್ಯಕ್ತಿಯನ್ನು ಬಂಧಿಸಿ, ದೇಶದ್ರೋಹ ಕೇಸ್ ಹಾಕಿ ಕ್ರಮ ಕೈಗೊಳ್ಳಬೇಕಾಗಿ ಆಗ್ರಹ ಮಾಡುತ್ತಿದ್ದೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷ ಬಾಬು ಮರಿಕೆ, ವಿಟ್ಲ ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷ ರಾಮಣ್ಣ ಪಿಲಿಂಜ, ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ್, ಜಿಲ್ಲಾ ಆರೋಗ್ಯ ರಕ್ಷಕ ಸಮಿತಿ ಸದಸ್ಯ ದಾಮೋದರ್ ಮುರ, ಯುವ ಕಾಂಗ್ರೆಸ್ ಜಿಲ್ಲಾ ಉಪಾದ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ, ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಪ್ರಹ್ಲಾದ್ ಬೆಳ್ಳಿಪ್ಪಾಡಿ, ದಲಿತ ಮುಖಂಡ ಉಪೇಂದ್ರ ಸಂಟ್ಯಾರು, ಬೂತ್ ಅಧ್ಯಕ್ಷ ಗಣೇಶ್ ಕಾರೆಕ್ಕಾಡು ಅವರು ದೂರು ನೀಡಿದರು.


