ಪುತ್ತೂರು: ಬೆಂಗಳೂರು–ಮಂಗಳೂರು ನಡುವೆ ಸಂಚರಿಸಲಿರುವ 16 ಬೋಗಿಗಳ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಾಯೋಗಿಕ ಸಂಚಾರದ ವೇಳೆ ಹಾಗೂ ಬಳಿಕ ವಾಣಿಜ್ಯ ಸಂಚಾರ ಆರಂಭವಾದಾಗ ನಿಯಮಿತ ನಿಲುಗಡೆ ಕಲ್ಪಿಸುವಂತೆ ಹಿರಿಯ ವಕೀಲರಾದ ಡಾ. ಅರುಣಾ ಶ್ಯಾಮ್. ಎಂ. ಅವರು ರೈಲ್ವೆ ಮಂಡಳಿಗೆ ಮನವಿ ಮಾಡಿದ್ದಾರೆ.
ರೈಲ್ವೆ ಮಂಡಳಿ ನಿರ್ದೇಶನದಂತೆ ಯಶವಂತಪುರ–ಮಂಗಳೂರು ಸೆಂಟ್ರಲ್ ನಡುವೆ ಸೆ.5ರಂದು 16 ಬೋಗಿಗಳ ವಂದೇ ಭಾರತ್ ಎಕ್ಸ್ಪ್ರೆಸ್ನ ಮತ್ತೊಂದು ಪ್ರಾಯೋಗಿಕ ಸಂಚಾರ ನಿಗದಿಯಾಗಿದೆ. ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ನಡುವಿನ ವೇಗದ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಈ ಸೇವೆ ಸ್ವಾಗತಾರ್ಹವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಹಾಗೂ ಆಡಳಿತ ಕೇಂದ್ರವಾಗಿದ್ದು, ಪುತ್ತೂರು ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಪ್ರದೇಶಗಳ ಪ್ರಯಾಣಿಕರಿಗೆ ಪ್ರಮುಖ ರೈಲು ಸಂಪರ್ಕ ಕೇಂದ್ರವಾಗಿದೆ. ಉದ್ಯೋಗ, ಶಿಕ್ಷಣ, ವ್ಯಾಪಾರ, ಆರೋಗ್ಯ ಸೇವೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಪುತ್ತೂರಿನಿಂದ ಬೆಂಗಳೂರು ಹಾಗೂ ಮಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತೆರಳುತ್ತಿದ್ದಾರೆ. ಹೀಗಾಗಿ ವಂದೇ ಭಾರತ್ ರೈಲಿಗೆ ಪುತ್ತೂರಿನಲ್ಲಿ ನಿಲುಗಡೆ ಕಲ್ಪಿಸುವುದು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಪ್ರಸ್ತುತ ರೈಲು ಪ್ರಾಯೋಗಿಕ ಸಂಚಾರ ಹಂತದಲ್ಲಿರುವುದರಿಂದ ಪುತ್ತೂರಿನಲ್ಲಿ ನಿಲುಗಡೆ ನೀಡಿದರೆ, ಪ್ರಯಾಣಿಕರ ಬೇಡಿಕೆ, ಹತ್ತುವ–ಇಳಿಯುವ ಪ್ರಯಾಣಿಕರ ಸಂಖ್ಯೆ, ನಿಲುಗಡೆಯ ಕಾರ್ಯಸಾಧ್ಯತೆ ಹಾಗೂ ಇದರಿಂದ ಉಂಟಾಗುವ ಸಮಯದ ಪರಿಣಾಮವನ್ನು ರೈಲ್ವೆ ಅಧಿಕಾರಿಗಳು ನೇರವಾಗಿ ಪರಿಶೀಲಿಸಲು ಸಾಧ್ಯವಾಗಲಿದೆ. ಇದರಿಂದ ವಾಣಿಜ್ಯ ಸಂಚಾರದ ಅಂತಿಮ ವೇಳಾಪಟ್ಟಿ ರೂಪಿಸುವ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ, ವಂದೇ ಭಾರತ್ನ ಪ್ರಾಯೋಗಿಕ ಸಂಚಾರದಲ್ಲೇ ಪುತ್ತೂರಿನಲ್ಲಿ ನಿಲುಗಡೆ ಕಲ್ಪಿಸಿ, ಬಳಿಕ ವಾಣಿಜ್ಯ ಸಂಚಾರ ಆರಂಭವಾದಾಗ ಅದನ್ನು ನಿಯಮಿತ ನಿಲುಗಡೆಯಾಗಿ ಮುಂದುವರಿಸುವಂತೆ ಡಾ. ಅರುಣಾ ಶ್ಯಾಮ್ ರೈಲ್ವೆ ಮಂಡಳಿಯನ್ನು ಒತ್ತಾಯಿಸಿದ್ದಾರೆ.


