ಯಕ್ಷಮಿತ್ರರು ದುಬಾಯಿ ತಂಡವು 2003ರಿಂದ ಮರಳುನಾಡು ದುಬಾಯಿಯಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ತಂಡದ 23ನೇ ವರ್ಷದ ಯಕ್ಷ ಸಂಭ್ರಮ-2026ರ ಅಂಗವಾಗಿ ಸೆ.23ರಂದು ಜುಮೇರಾದ ಎಮಿರೇಟ್ಸ್ ಥಿಯೇಟರ್ನ ಭವ್ಯ ರಂಗಮಂಟಪದಲ್ಲಿ ಪ್ರದರ್ಶನಗೊಳ್ಳಲಿರುವ ಭಕ್ತಿಪ್ರಧಾನ ಯಕ್ಷಗಾನ ಶ್ರೀ ಕೃಷ್ಣ ಲೀಲೆಯ ಆಮಂತ್ರಣ ಪತ್ರ ಹಾಗೂ ಟಿಕೆಟ್ ಬಿಡುಗಡೆ ಸಮಾರಂಭವು ನಗರದ ಮ್ಯಾಂಚೆಸ್ಟರ್ ಪ್ಲಾಜಾ ಹೋಟೆಲ್ನ ಸಭಾಂಗಣದಲ್ಲಿ ನಡೆಯಿತು.

ಯಕ್ಷಮಿತ್ರರು ತಂಡದ ಹಿರಿಯರು ಹಾಗೂ ಸ್ಥಾಪಕ ಸದಸ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಂಡದ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಶುಭಾರಂಭಗೊಂಡಿತು. ವೆಂಕಟೇಶ ಶಾಸ್ತ್ರಿ ಪುತ್ತಿಗೆ ಮತ್ತು ಭವಾನಿ ಶಂಕರ ಶರ್ಮ ಅವರು ಶುಭಾಶಂಸನೆಗೈದರು.

ಯಕ್ಷಮಿತ್ರರು ತಂಡದ ರೂವಾರಿ ಚಿದಾನಂದ ಪೂಜಾರಿ, ದಯಾ ಕಿರೋಡಿಯನ್, ಪ್ರಭಾಕರ್ ಡಿ. ಸುವರ್ಣ, ಜಯಂತ್ ಶೆಟ್ಟಿ, ನೋಯಲ್ ಆಲ್ಮೆಡಾ, ಕೃಷ್ಣ ಪ್ರಸಾದ್ ರಾವ್ ಸುರತ್ಕಲ್ ಹಾಗೂ ಯಕ್ಷಗುರು ಕಿಶೋರ್ ಗಟ್ಟಿ ಉಚ್ಚಿಲ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಊರಿನ ಪ್ರಸಿದ್ಧ ಭಾಗವತರಾದ ಕಟೀಲು ಮೇಳದ ಶ್ರೀ ಸತೀಶ್ ಶೆಟ್ಟಿ, ಬೋಂದೆಲ್ ಅವರ ಭಾಗವತಿಕೆಯೊಂದಿಗೆ, ಚೆಂಡೆ?ಮದ್ದಳೆಯಲ್ಲಿ ಹೊಸನಗರ ಮೇಳದ ಸುಬ್ರಹ್ಮಣ್ಯ ಭಟ್ ದೇಲಂತಮಜಲು ಹಾಗೂ ಕಟೀಲು ಮೇಳದ ಹಿರಣ್ಮಯ ಆಚಾರ್ಯ ರಂಜಿಸಲಿದ್ದಾರೆ. ವೇಷಭೂಷಣದಲ್ಲಿ ಜಯಂತ್ ಪೈವಳಿಕೆ ಮತ್ತು ಪ್ರಸಾದ್ ಕಾಯರ್ ಕಟ್ಟೆ ಹಾಗೂ ಯಕ್ಷಮಿತ್ರರು ದುಬೈಯ ಕಲಾವಿದರ ಕೂಡುವಿಕೆಯೊಂದಿಗೆ, ಯಕ್ಷಗುರು ಕಿಶೋರ್ ಗಟ್ಟಿ ಅವರ ದಕ್ಷ ನಿರ್ದೇಶನದಲ್ಲಿ ’ಶ್ರೀ ಕೃಷ್ಣ ಲೀಲೆ’ ಪ್ರಸಂಗವು ಸಂಪನ್ನಗೊಳ್ಳಲಿದೆ ಎಂದು ಸಭೆಗೆ ತಿಳಿಸಲಾಯಿತು.
ಬಾಲಕೃಷ್ಣ ಡಿ. ಶೆಟ್ಟಿಗಾರ್ ಸ್ವಾಗತಿಸಿದರು. ರಚನಾ ಅನಿಲ್ ರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.


