HomeFresh Newsಶತಮಾನೋತ್ಸವ ಆಚರಿಸುತ್ತಿರುವ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಕುವೈಟ್ ಘಟಕದ ಅಧ್ಯಕ್ಷರಾಗಿ ರಮೇಶ್ ಕಿದಿಯೂರು ನೇಮಕ

ಶತಮಾನೋತ್ಸವ ಆಚರಿಸುತ್ತಿರುವ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಕುವೈಟ್ ಘಟಕದ ಅಧ್ಯಕ್ಷರಾಗಿ ರಮೇಶ್ ಕಿದಿಯೂರು ನೇಮಕ

ಮಂಗಳೂರು, ಸೆಪ್ಟೆಂಬರ್ 9, 2026: ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ತುಳುವರ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ತುಳುವ ಮಹಾಸಭೆ ಇಂಟರ್‌ನ್ಯಾಷನಲ್, ಶತಮಾನೋತ್ಸವ ಆಚರಿಸುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ ತನ್ನ ಅಂತರರಾಷ್ಟ್ರೀಯ ಸಂಘಟನಾ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕುವೈಟ್ ಘಟಕದ ಅಧ್ಯಕ್ಷರಾಗಿ ಶ್ರೀ ರಮೇಶ್ ಕಿದಿಯೂರೆಯವರನ್ನು ನೇಮಕ ಮಾಡಿದೆ.

ಉಡುಪಿಯ ಕಿದಿಯೂರಿನಲ್ಲಿ ಜನಿಸಿದ ಶ್ರೀ ರಮೇಶ್ ಕಿದಿಯೂರು ಅವರು ಮೆಕಾನಿಕಲ್ ಎಂಜಿನಿಯರಿಂಗ್ ಶಿಕ್ಷಣವನ್ನು ಪೂರ್ಣಗೊಳಿಸಿ, ಉಳ್ಳಾಲದ SM Technical Instituteನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ಬಳಿಕ ಮುಂಬೈನ ಗೋರೆಗಾಂವ್‌ನ Diamond Cutting Machine Companyಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸಿದರು.

ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರಗಳಿಗೆ ತೆರಳಿದ ಅವರು ಸೌದಿ ಅರೇಬಿಯಾದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ ಕುವೈಟ್‌ನ Al Injaz Electro Mechanical Companyಯಲ್ಲಿ Electro Mechanical Contractor ಆಗಿ ಕಾರ್ಯ
ನಿರ್ವಹಿಸುತ್ತಿದ್ದಾರೆ.
ತುಳು ಸಮುದಾಯದೊಂದಿಗೆ ಸಕ್ರಿಯ ಸಂಪರ್ಕ ಹೊಂದಿ 2012–13ರಲ್ಲಿ ಕುವೈಟ್ ತುಳುಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಮೇಶ್ ಕಿದಿಯೂರು ಅವರು ತುಳು ಭಾಷೆಯ ಉಳಿವು ಹಾಗೂ ಬೆಳವಣಿಗೆಗಾಗಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕುವೈಟ್‌ನಲ್ಲಿ ವಿಶ್ವ ತುಳು ಸಮಾವೇಶವನ್ನು ಆಯೋಜಿಸಿ, ಊರಿನಿಂದ 300ಕ್ಕೂ ಅಧಿಕ ಯಕ್ಷಗಾನ ಹಾಗೂ ನಾಟಕ ಕಲಾವಿದರನ್ನು ಕರೆಸಿ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿರುವುದು ಅವರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ತುಳು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಪಾರ ಕಾಳಜಿಯಿಂದಾಗಿ ತುಳುವಿನ ಉಳಿವು ಹಾಗೂ ಜಾಗತಿಕ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಅವರು, ಐಲೇಸಾ – ದಿ ವಾಯ್ಸ್ ಆಫ್ ಓಷನ್ ಹಾಗೂ ಗ್ಲೋಬಲ್ ಅಲಯನ್ಸ್ ಆಫ್ ತುಳು ಅಸೋಸಿಯೇಷನ್ ಸೇರಿದಂತೆ ಜಾಗತಿಕ ತುಳು ಸಂಸ್ಥೆಗಳೊಂದಿಗೆ ಒಡನಾಟ ಹೊಂದಿದ್ದಾರೆ.

ಕ್ರೀಡೆ ಹಾಗೂ ಸಮಾಜಸೇವೆಯಲ್ಲೂ ಕೊಡುಗೆ

ವಾಲಿಬಾಲ್ ಕ್ರೀಡಾಪಟುವಾಗಿದ್ದ ರಮೇಶ್ ಕಿದಿಯೂರು ಅವರು ಕ್ರೀಡಾ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದು, ಏಷ್ಯಾ ಮಟ್ಟದ ವಾಲಿಬಾಲ್ ಪಂದ್ಯಾವಳಿಗಳು ಹಾಗೂ ಮಹಿಳೆಯರಿಗಾಗಿ ತ್ರೋಬಾಲ್ ಪಂದ್ಯಾವಳಿಗಳನ್ನು ಆಯೋಜಿಸಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದ್ದಾರೆ.

ಕುವೈಟ್ ಕನ್ನಡ ಕೂಟದ ಸಕ್ರಿಯ ಸದಸ್ಯರಾಗಿದ್ದ ಅವರು ನಾಲ್ಕು ವರ್ಷಗಳ ಕಾಲ ಫೈನಾನ್ಸ್ ಕಮಿಟಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಗಿರಿಚಂದ್ ಚಾರಿಟೇಬಲ್ ಟ್ರಸ್ಟ್ ಮೂಲಕ ಅಗತ್ಯವಿರುವ ಸಮುದಾಯಗಳಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು, ಇಸ್ಕಾನ್ ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆಗಳ ಮೂಲಕ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದಾರೆ.

ಕುವೈಟ್ ಘಟಕಕ್ಕೆ ಹೊಸ ಹೊಣೆಗಾರಿಕೆ

ತುಳು ಭಾಷೆ, ಕಲೆ, ಸಂಸ್ಕೃತಿ, ಕ್ರೀಡೆ ಹಾಗೂ ಸಮಾಜಸೇವೆಯ ಕ್ಷೇತ್ರದಲ್ಲಿನ ದೀರ್ಘಕಾಲದ ಅನುಭವ, ಸಂಘಟನಾ ಸಾಮರ್ಥ್ಯ ಮತ್ತು ಕುವೈಟ್‌ನ ತುಳು ಸಮುದಾಯದೊಂದಿಗಿನ ನಿಕಟ ಸಂಪರ್ಕವನ್ನು ಪರಿಗಣಿಸಿ ಶ್ರೀ ರಮೇಶ್ ಕಿದಿಯೂರೆಯವರನ್ನು ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಕುವೈಟ್ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಕುವೈಟ್‌ನಲ್ಲಿ ನೆಲೆಸಿರುವ ತುಳುವರನ್ನು ಸಂಘಟಿಸಿ, ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ತುಳುವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಅವರ ನಾಯಕತ್ವ ಮಹತ್ವದ ಪಾತ್ರ ವಹಿಸಲಿದೆ ಎಂಬ ವಿಶ್ವಾಸವನ್ನು ಸಂಸ್ಥೆ ವ್ಯಕ್ತಪಡಿಸಿದೆ.

ಅಂತರರಾಷ್ಟ್ರೀಯ ಅಧ್ಯಕ್ಷರಿಂದ ನೇಮಕ

ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಅವರು ಶ್ರೀ ರಮೇಶ್ ಕಿದಿಯೂರೆಯವರನ್ನು ಕುವೈಟ್ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀ ಶ್ರೀಹರಿನಾರಾಯಣದಾಸ ಅಸ್ರಣ್ಣ ಕಟೀಲ್, ಅಧ್ಯಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ಶ್ರೀ ವಸಂತ ರೈ ಕುತ್ತೇತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ, ಹಾಗೂ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಶ್ರೀ ದೇವೇಂದ್ರ ಹೆಗ್ಗಡೆ ಕೊಕ್ರಾಡಿ ಮತ್ತು ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ.ಆರ್. ಆಳ್ವ ಅವರು ಅಭಿನಂದಿಸಿ, ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದ್ದಾರೆ.

ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಶತಮಾನೋತ್ಸವದ ಈ ಐತಿಹಾಸಿಕ ಸಂದರ್ಭದಲ್ಲಿ ಕುವೈಟ್ ಘಟಕಕ್ಕೆ ದೊರೆತಿರುವ ಹೊಸ ನಾಯಕತ್ವವು ಜಾಗತಿಕ ಮಟ್ಟದಲ್ಲಿ ತುಳು ಸಂಘಟನೆ, ತುಳು ಭಾಷೆ ಮತ್ತು ಸಂಸ್ಕೃತಿಯ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ಬಲ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

swarna sep
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments