HomeFresh Newsಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಮಂಗಳೂರು: “ಶಿಕ್ಷಣವು ಯಶಸ್ಸಿನ ದಾರಿಯಾಗಿದ್ದು, ಶಿಕ್ಷಕರು ಅದರ ಮಾರ್ಗದರ್ಶಕರು” ಎಂದು ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಪ್ರಾಂಶುಪಾಲರು ರೆ.ಫಾ. ರೋಹನ್ ಡಿ’ಅಲ್ಮೇಡಾ ಎಸ್. ಜೆ ಅಭಿಪ್ರಾಯಪಟ್ಟರು.

ಶಾಲೆಯಲ್ಲಿ ಸೆ. 5 ರಂದು ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರು ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ಕುಟುಂಬದ ಜವಾಬ್ದಾರಿಗಳೊಂದಿಗೆ ಸಮತೋಲನಗೊಳಿಸುತ್ತಾ ಅತ್ಯಂತ ಸಮರ್ಪಣಾಭಾವದಿಂದ ಕರ್ತವ್ಯ ನಿರ್ವಹಿಸುತ್ತಾರೆ. ಸಮಾಜದಲ್ಲಿರುವ ಪ್ರತಿಯೊಂದು ವೃತ್ತಿಗೂ ಶಿಕ್ಷಕರೇ ಮೂಲಾಧಾರವಾಗಿದ್ದು, ಶಿಕ್ಷಕ ವೃತ್ತಿಯು ಇತರ ಎಲ್ಲ ವೃತ್ತಿಗಳಿಗೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಸಮಾಜದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದ ಅವರು ಶಿಕ್ಷಕರಿಗೆ ಇತ್ತೀಚೆಗೆ ದೊರೆತಿರುವ ಅಧಿಕೃತ ಮಾನ್ಯತೆಯ ಕುರಿತು ಪ್ರಸ್ತಾಪಿಸಿದ ಅವರು, ಶಿಕ್ಷಕರು ತಮ್ಮ ಹೆಸರಿನ ಮುಂದೆ ‘Tr.’ ಎಂಬ ಪೂರ್ವಪ್ರತ್ಯಯ ಬಳಸಲು ಅವಕಾಶ ಕಲ್ಪಿಸಿರುವುದು ಶಿಕ್ಷಕರ ಕ್ಷೇತ್ರಕ್ಕೆ ಸಂದ ಮಹತ್ತರ ಗೌರವವಾಗಿದೆ. ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿ, ಅವರ ಪರಿಶ್ರಮವನ್ನು ಅರ್ಥಮಾಡಿಕೊಂಡು ಕೃತಜ್ಞತೆಯಿಂದ ಇರಬೇಕಿದೆ. ವಿದ್ಯಾರ್ಥಿಗಳು ಉತ್ತಮ ಗುಣನಡತೆಯ ವ್ಯಕ್ತಿಗಳಾಗಿ ಬೆಳೆದು “ಇತರರಿಗಾಗಿ ಮತ್ತು ಇತರರೊಂದಿಗೆ” ಬದುಕುವ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರ ಸೇವೆ ಮತ್ತು ಬದ್ಧತೆಯನ್ನು ಗೌರವಿಸುವ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿಯ ವತಿಯಿಂದ ಶಿಕ್ಷಕರನ್ನು ವಿಶೇಷ ಉಡುಗೊರೆ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿ ಪರಿಷತ್ತಿನ ನೇತೃತ್ವದಲ್ಲಿ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮವು “1980ರ ದಶಕದಿಂದ 2020ರ ದಶಕದವರೆಗೆ” ಎಂಬ ವಿಷಯಾಧಾರಿತವಾಗಿತ್ತು. ನಾಲ್ಕು ದಶಕಗಳ ಸಂಗೀತ, ನೃತ್ಯ, ಫ್ಯಾಷನ್ ಹಾಗೂ ಮನರಂಜನೆಯ ನೆನಪುಗಳನ್ನು ಮರುಕಳಿಸುವ ಮೂಲಕ ಕಾರ್ಯಕ್ರಮವು ಪ್ರೇಕ್ಷಕರನ್ನು ‘ನಾಸ್ಟಾಲ್ಜಿಕ್ ‘ ಪಯಣಕ್ಕೆ ಕರೆದೊಯ್ದಿತು. ವಿದ್ಯಾರ್ಥಿಗಳು ವೈವಿಧ್ಯಮಯ ನೃತ್ಯ ಪ್ರದರ್ಶನಗಳು, ಸಂಗೀತ ವಾದ್ಯವೃಂದ, ಕಿರುನಾಟಕ ಹಾಗೂ ಶೈಕ್ಷಣಿಕ ವಿಷಯಾಧಾರಿತ ರ‍್ಯಾಂಪ್ ವಾಕ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳು
ಭಾಗವಹಿಸಿದ ವಿಶೇಷ ಸಾಮೂಹಿಕ ಗೀತೆಯೂ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಇದೇ ಸಂದರ್ಭದಲ್ಲಿ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ವಿದ್ಯಾರ್ಥಿ ಹಾಗೂ ಝೀ ಕನ್ನಡದ ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ವಿಜೇತ ಅಶ್ಮಿತ್ ಎ. ಜೆ. ಅವರನ್ನು ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಸಂಯೋಜಕರು ಸನ್ಮಾನಿಸಿದರು. ಅಶ್ಮಿತ್ ಅವರ ಸಾಧನೆಯನ್ನು ಗುರುತಿಸಿ ನಡೆದ ಈ ಸನ್ಮಾನ ಕಾರ್ಯಕ್ರಮದಲ್ಲಿ ಅವರ ಪೋಷಕರು ಉಪಸ್ಥಿತರಿದ್ದು ಸಂಭ್ರಮ ಹಂಚಿಕೊಂಡರು. ಅಶ್ಮಿತ್ ಹಾಗೂ ಅವರ ತಂದೆಯೂ ಕಾರ್ಯಕ್ರಮದಲ್ಲಿ ಮಾತನಾಡಿ, ಅಶ್ಮಿತ್ ಅವರ ಸಂಗೀತ ಪಯಣ, ಅನುಭವಗಳು, ಸಾಧನೆಯ ಹಿಂದಿನ ಪರಿಶ್ರಮ ಹಾಗೂ ಬೆಳವಣಿಗೆಯ ಹಾದಿಯನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಪೋಷಕ-ಶಿಕ್ಷಕ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments