ಉಡುಪಿ: ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಕಾಲೇಜಿನಲ್ಲಿ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಸರೂಪಾ ಟಿ.ಕೆ., ಐಎಎಸ್., ಮಾತನಾಡಿ, ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರ ಬದಲಾವಣೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಬದಲಾವಣೆಗೆ ತಕ್ಕಂತೆ ತಮ್ಮನ್ನು ತಾವು ಹೊಂದಿಕೊಳ್ಳಬೇಕು. ಭವಿಷ್ಯದಲ್ಲಿ ಇತರರಿಗೆ ಮಾದರಿಯಾಗುವುದರ ಜೊತೆಗೆ ತಮ್ಮ ವೃತ್ತಿಧರ್ಮಕ್ಕೆ ಅನುಗುಣವಾಗಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಗೌರವ ಅತಿಥಿಯಾಗಿ ಆಗಮಿಸಿದ್ದ ಜಿ.ಎಂ. ಉದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ ಅವರು, ಸಮಾಜದಿಂದ ಪಡೆದು ಸಮಾಜಕ್ಕೆ ಸೇವೆ ಸಲ್ಲಿಸುವ ಆರೋಗ್ಯ ಸೇವಾ ಸಿಬ್ಬಂದಿಯನ್ನು ರೂಪಿಸುವಲ್ಲಿ ನೇತ್ರ ಜ್ಯೋತಿ ಕಾಲೇಜಿನ ಕೊಡುಗೆಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ತಂದೆ-ತಾಯಿ ಹಾಗೂ ಗುರುಗಳ ತ್ಯಾಗವನ್ನು ಮರೆಯಬಾರದು ಎಂದರು.
ಕಾಲೇಜಿನ ಅಧ್ಯಕ್ಷರಾದ ಶ್ರೀಮತಿ ರಶ್ಮಿ ಕೃಷ್ಣಪ್ರಸಾದ್ ಅವರು ಮಾತನಾಡಿ, ದೇಶಕ್ಕೆ ಸೈನಿಕರು ಎಷ್ಟು ಮುಖ್ಯವೋ ಆರೋಗ್ಯ ಸೇವಾ ಕಾರ್ಯಕರ್ತರೂ ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ತಾಳ್ಮೆ, ಸಹನೆ ಹಾಗೂ ಉತ್ತಮ ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸ್ಥಾಪಕ ಅಧ್ಯಕ್ಷ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲೂರವರು ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ. ವೈದ್ಯರು ನಿರ್ವಹಿಸುವ ಅನೇಕ ಕಾರ್ಯಗಳಲ್ಲಿ ಆರೋಗ್ಯ ಸೇವಾ ಸಿಬ್ಬಂದಿಯ ಪಾತ್ರವೂ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಭೂಮಿಕಾ ಮತ್ತು ಸಂಘಟಕರು ಪ್ರಾರ್ಥಿಸಿದರು. ಶಮ ಸ್ವಾಗತಿಸಿದರು. ನೌಜೀನ್ ವಂದಿಸಿದರು. ಕುಮಾರಿ ಪ್ರೇಮ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ಎಚ್ಆರ್ ಶ್ರೀಮತಿ ತಾರಾ ಶಶಿಧರ್ ಮಂಡಿಸಿದರು.


