HomeFresh Newsಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ ಆಶ್ರಯದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ ಆಶ್ರಯದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ದುಬೈ : ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ ಆಶ್ರಯದಲ್ಲಿ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.20ರಂದು ಅಜ್ಮಾನ್‌ನ ಜುರ್ಫ್‌ನಲ್ಲಿರುವ ಇಂಡಿಯನ್ ಅಸೋಸಿಯೇಷನ್ ಹಾಲ್‌ನಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ಗಣಹೋಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, 9 ಗಂಟೆಗೆ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಬಳಿಕ ಭಜನಾ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ನಡೆಯಲಿದೆ. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿಶೇಷ ವಾದ್ಯಘೋಷಗಳ ಮೆರವಣಿಗೆ ನಡೆಯಲಿದ್ದು, ಸಂಜೆ 6 ಗಂಟೆಗೆ ಗಣೇಶ ಮೂರ್ತಿ ವಿಸರ್ಜನೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.


ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವ ಹಾಗೂ ಉದ್ಯಮಿಗಳಾದ ಕೃಷ್ಣ ಜೆ. ಪಾಲೇಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಸಂಘ ಅಬುಧಾಬಿ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಮಹೇಶ್ ಚಂದ್ರಗಿರಿ ಸೇರಿದಂತೆ ಗಣ್ಯರು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಬಡವರ ಪಾಲಿನ ಆಶಾಕಿರಣ, ಸಮಾಜಸೇವೆಯ ಮೂಲಕ ಅನೇಕ ವಿಶೇಷ ಮಕ್ಕಳ ಬದುಕಿಗೆ ಬೆಳಕಾದ ಉಡುಪಿಯ ಖ್ಯಾತ ಸಮಾಜಸೇವಕ ರವಿ ಕಟಪಾಡಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಕಾಪು ತಾಲೂಕಿನ ಕಟಪಾಡಿಯ ಸಮಾಜಸೇವಕ ರವಿ ಕಟಪಾಡಿ ಅವರು ಕಟ್ಟಡ ಸೆಂಟ್ರಿಂಗ್ ಕಾರ್ಮಿಕರಾಗಿ ದುಡಿಯುತ್ತಲೇ ಕಳೆದ 14 ವರ್ಷಗಳಿಂದ ಜನ್ಮಾಷ್ಟಮಿ ಸಂದರ್ಭದಲ್ಲಿ ವಿಭಿನ್ನ ವೇಷ ಧರಿಸಿ ಹಣ ಸಂಗ್ರಹಿಸಿ ಬಡ ಹಾಗೂ ಅನಾರೋಗ್ಯಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಅವರ ತಂಡ ₹1.85 ಕೋಟಿ ಸಂಗ್ರಹಿಸಿ 204 ಮಕ್ಕಳ ಚಿಕಿತ್ಸೆಗೆ ಸಹಾಯ ಮಾಡಿದೆ.


ಅವರ ಸಮಾಜಸೇವೆಯನ್ನು ಗುರುತಿಸಿ ‘ಕೌನ್ ಬನೇಗಾ ಕರೋಡ್ಪತಿ’ಯ ಕರ್ಮವೀರ್ ವಿಶೇಷ ಸಂಚಿಕೆಗೆ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೊರೆತ ಬಹುಮಾನದ ಹಣವನ್ನೂ ಮಕ್ಕಳ ಚಿಕಿತ್ಸೆಗೆ ದಾನ ಮಾಡಿದ್ದರು. ಅವರ ಸೇವೆಗೆ 80ಕ್ಕೂ ಹೆಚ್ಚು ಸ್ವಯಂಸೇವಕರ ತಂಡ ಬೆಂಬಲ ನೀಡುತ್ತಿದೆ.
ಗಣೇಶೋತ್ಸವದ ಅಂಗವಾಗಿ ನಾದ ಸಂಕೀರ್ತನ ಭಜನ್ಸ್ , ಓಂ ಶ್ರೀ ಭಜನಾ ವೃಂದ, ಶಾರ್ಜಾ, ಶ್ರೀ ರಾಜರಾಜೇಶ್ವರಿ ಭಜನಾ ವೃಂದ, ದುಬೈ ಹಾಗೂ ಮಾರ್ಗದೀಪ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ರಂಗಸಾರಥಿ ಪ್ರತಿಷ್ಠಾನ ಯುಎಇ, ಸ್ಟೈಲ್ ಕ್ರಿಯೇಷನ್ ದುಬೈ, ಸಂಸ್ಕೃತಿ ನೃತ್ಯ ಶಾಲೆ ಹಾಗೂ ವಾಗ್ದೇವಿ ಮ್ಯೂಸಿಕಲ್ ಸ್ಕೂಲ್ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಉತ್ಸವದ ವಿಶೇಷ ಆಕರ್ಷಣೆಯಾಗಿ ತ್ರಿವಿಕ್ರಮ್ ಢೋಲ್ ತಾಷಾ ಪಥಕ್ ದುಬೈ ವತಿಯಿಂದ ನಾಸಿಕ್ ಢೋಲ್ ಹಾಗೂ ಸರಸ್ವತಿ ವಾದ್ಯ ಕಲಾ ಸಂಘಂ ದುಬೈ ವತಿಯಿಂದ ಚಂಡೆ ವಾದ್ಯ ಪ್ರದರ್ಶನ ನಡೆಯಲಿದೆ.
ಯುಎಇಯ ಕನ್ನಡಿಗರು ಹಾಗೂ ಭಾರತೀಯ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಣೇಶೋತ್ಸವದ ಭಕ್ತಿ ಸಂಭ್ರಮದಲ್ಲಿ ಭಾಗಿಯಾಗುವಂತೆ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಪದಾಧಿಕಾರಿಗಳು ಹಾಗೂ ಆಯೋಜಕರು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments