ಭಾರತದ 4*400 ಮೀಟರ್ಸ್ ಮಿಶ್ರ ರಿಲೆ ತಂಡವು ಸತತ ಮೂರನೇ ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿತು. ಗುರುವಾರ ನಡೆದ ಓಟದಲ್ಲಿ ಕನ್ನಡತಿ ಎಂ.ಆರ್. ಪೂವಮ್ಮ, ಟಿ.ಎಸ್. ಮನು, ಟಿ.ಕೆ. ವಿಶಾಲ್ ಮತ್ತು ವಿದ್ಯಾ ರಾಮರಾಜ್ ಅವರ ತಂಡವು ಬೆಳ್ಳಿ ಪದಕ ಗಳಿಸಿತು.
ಈ ಸ್ಪರ್ಧೆಯಲ್ಲಿ ಬಹರೇನ್ ತಂಡವು ಚಿನ್ನದ ಪದಕ ಗೆದ್ದಿತು. ಅದರೊಂದಿಗೆ ಕೂಟ ದಾಖಲೆ ಬರೆಯಿತು. ಭಾರತ ತಂಡವು 3 ನಿಮಿಷ, 14.46 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು. 2018ರಲ್ಲಿ ಭಾರತವು ಚಿನ್ನ ಜಯಿಸಿತ್ತು. 2023ರಲ್ಲಿ ಬೆಳ್ಳಿ ಗಳಿಸಿತ್ತು.

‘ನಾವು ಚಿನ್ನವನ್ನು ನಿರೀಕ್ಷಿಸಿದ್ದೆವು. ಆದರೆ ಬಹರೇನ್ ಅಥ್ಲೀಟ್‌ಗಳು ನಮಗೆ ಕಠಿಣ ಪೈಪೋಟಿಯೊಡ್ಡಿದರು. ಆದರೆ ನಾವು ಬಹಳ ಉತ್ತಮ ಸ್ಪರ್ಧೆಯೊಡ್ಡಿದೆವು’ ಎಂದು ಪೂವಮ್ಮ ಹೇಳಿದರು.
‘ಮಹಿಳೆಯರ 400 ಮೀ ರಿಲೆಯಲ್ಲಿ ಚಿನ್ನದ ಪದಕ ಗೆಲ್ಲುವುದು ನಮ್ಮ ಗುರಿ’ ಎಂದೂ ವಿಶ್ವಾಸ ವ್ಯಕ್ತಪಡಿಸಿದರು. ಅಂತಿಮ ಸುತ್ತಿನಲ್ಲಿ ನಾಲ್ವರೂ ಓಟಗಾರರು ಉತ್ತಮ ಹೊಂದಾಣಿಕೆ ತೋರಿದರು. ಬೇಟನ್ ಹಸ್ತಾಂತರದಲ್ಲಿ ಚುರುಕುತನ ಗಮನ ಸೆಳೆಯಿತು. ಕೇರಳದ ಮನು ಅವರು ತಮ್ಮ ಲ್ಯಾಪ್‌ನಲ್ಲಿ ವೇಗವನ್ನು ಹೆಚ್ಚಿಸುವ ಮೂಲಕ ನಂತರದ ಸರದಿಯ ಓಟಗಾರರಿಗೆ ಆತ್ಮವಿಶ್ವಾಸ ತುಂಬಿದರು. ಇದರಿಂದಾಗಿ ಎರಡನೇ ಸ್ಥಾನವನ್ನು ಗಳಿಸಲು ಸಾಧ್ಯವಾಯಿತು.

