ಪಡುಕುತ್ಯಾರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭಾನುವಾರ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನಕ್ಕೆ ಭೇಟಿ ನೀಡಿ ಪರಮಪೂಜ್ಯ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆಶೀರ್ವಾದ ಪಡೆದರು.
ಮಹಾಸಂಸ್ಥಾನಕ್ಕೆ ಆಗಮಿಸಿದ ವಿಜಯೇಂದ್ರ ಅವರನ್ನು ಶ್ರೀಮಠದ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ಮಠದ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು.
ನಂತರ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರನ್ನು ಭೇಟಿ ಮಾಡಿದ ವಿಜಯೇಂದ್ರ ಅವರು, ಪ್ರಧಾನಮಂತ್ರಿಯವರ 12 ವರ್ಷಗಳ ಸಾಧನೆಗಳನ್ನು ಒಳಗೊಂಡ ಪುಸ್ತಕವನ್ನು ಜಗದ್ಗುರುಗಳಿಗೆ ಸಮರ್ಪಿಸಿದರು.
ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು. ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಮಠದ ವಿವಿಧ ಯೋಜನೆಗಳ ಕುರಿತು ವಿವರಿಸಿದರು. ಅಲ್ಲದೆ, ಮಠದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ದೊರಕಿಸಲು ಸಹಕಾರ ನೀಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಶ್ರೀಮಠದ ವತಿಯಿಂದ ಬಿ.ವೈ. ವಿಜಯೇಂದ್ರ ಅವರನ್ನು ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ರುದ್ರಾಕ್ಷಿ ಮಾಲೆ, ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಗೌರವ ಸ್ವೀಕರಿಸಿದ ವಿಜಯೇಂದ್ರ ಅವರು ಕೃತಜ್ಞತೆ ಸಲ್ಲಿಸಿ, ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶ್ರೀಮಠಕ್ಕೆ ನೀಡಿದ ಕೊಡುಗೆಗಳಂತೆ ತಾನೂ ಮುಂದಿನ ದಿನಗಳಲ್ಲಿ ಶ್ರೀಮಠದ ಸೇವೆಗೆ ಬದ್ಧನಾಗಿರುವುದಾಗಿ ತಿಳಿಸಿದರು.
ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಜಗದೀಶ್ ಪಡುಪಣಂಬೂರು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಈ ವೇಳೆ ಬಿ.ವೈ. ವಿಜಯೇಂದ್ರ ಅವರನ್ನು ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಿದರು.
ಆಶೀರ್ವಚನ ನೀಡಿದ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶ್ರೀಮಠಕ್ಕೆ ಆಗಮಿಸಿ ಸೇವೆ ಸಲ್ಲಿಸಿದ್ದನ್ನು ಹಾಗೂ ಸರ್ಕಾರದ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಿದ್ದನ್ನು ಸ್ಮರಿಸಿದರು. ದೇವಾಲಯಗಳ ಅಭಿವೃದ್ಧಿಗೂ ಸರ್ಕಾರದ ಅನುದಾನ ದೊರೆಯುವಂತಾದ ವ್ಯವಸ್ಥೆಗೆ ಯಡಿಯೂರಪ್ಪ ಅವರು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಾಜದ ಅನೇಕ ಬಂಧುಗಳು ಪಕ್ಷದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದು, ಹಲವು ವರ್ಷಗಳಿಂದ ದುಡಿಯುವ ಹಂತದಲ್ಲಿಯೇ ಇದ್ದಾರೆ. ಅಂತಹ ಸಮಾಜದ ಬಂಧುಗಳಿಗೆ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ಹಾಗೂ ಉತ್ತಮ ಅವಕಾಶಗಳನ್ನು ನೀಡಿದರೆ ಸಮಾಜಕ್ಕೂ ಸಂತೋಷವಾಗುತ್ತದೆ ಮತ್ತು ಇದರಿಂದ ಪಕ್ಷಕ್ಕೂ ಪ್ರಯೋಜನವಾಗುತ್ತದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಅವಕಾಶಗಳನ್ನು ಕಲ್ಪಿಸುವಂತೆ ಜಗದ್ಗುರುಗಳು ತಿಳಿಸಿದರು.
ಬಿ.ವೈ. ವಿಜಯೇಂದ್ರ ಅವರ ಆಶೋತ್ತರಗಳು ಈಡೇರಲಿ ಎಂದು ಅನುಗ್ರಹಿಸಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಗುರುರಾಜ ಗಂಟಿಹೊಳಿ, ಕಿರಣ್ ಕೊಡ್ಗಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಜಿತೇಂದ್ರ ಶೆಟ್ಟಿ ಉದ್ಯಾವರ, ಶಿಲ್ಪಾ ಜಿ. ಸುವರ್ಣ, ರೇಷ್ಮಾ ಉದಯ ಶೆಟ್ಟಿ, ಅಸೆಟ್ ಅಧ್ಯಕ್ಷ ಬಿ. ಸೂರ್ಯಕುಮಾರ್, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ, ಗೋ ಸಂರಕ್ಷಣಾ ಟ್ರಸ್ಟ್ ನಿಯುಕ್ತ ಅಧ್ಯಕ್ಷ ದಿನೇಶ್ ಕಿನ್ನಿಗೋಳಿ, ಸರಸ್ವತಿ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೇಶವ ಶರ್ಮ
ವಿಶ್ವಕರ್ಮ ಸಹಕಾರ ಬ್ಯಾಂಕಿನ ಮಾರ್ಗದರ್ಶಕ ಮಂಡಳಿ ಸದಸ್ಯರಾದ ಡಾ. ಎಸ್.ಆರ್. ಹರೀಶ್ ಆಚಾರ್ಯ ಜಲಕಲದಕಟ್ಟೆ, ಚಂದ್ರಯ್ಯ ಆಚಾರ್ಯ ಕಳಿ, ಸುಧಾಕರ ಆಚಾರ್ಯ ತ್ರಾಸಿ, ಜಯಕರ ಆಚಾರ್ಯ ಕರಂಬಳ್ಳಿ, ರತ್ನಾಕರ ಆಚಾರ್ಯ ಉದ್ಯಾವರ, ದಯಾನಂದ ಆಚಾರ್ಯ ಕೇಳಾರ್ಕಳಬೆಟ್ಟು ಹಾಗೂ ಜಗದೀಶ್ ಆಚಾರ್ಯ ಕಪ್ಪೆಟ್ಟು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಭಕ್ತರು ಭಾಗವಹಿಸಿದ್ದರು.
ಆನೆಗುಂದಿ ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ಬೆಳವಾಯಿ ಧನ್ಯವಾದ ಸಲ್ಲಿಸಿದರು. ಮೌನೇಶ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.


