ಮಸ್ಕತ್: ಕರ್ನಾಟಕದ ರಕ್ತದಾನ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಸಮಾಜಸೇವಕ ಹಾಗೂ ರಕ್ತದಾನ ಪ್ರೇರಕ ಸತೀಶ್ ಸಾಲ್ಯಾನ್, ಉಡುಪಿ ಅವರು ಮಸ್ಕತ್ಗೆ ಆಗಮಿಸಿದ ಸಂದರ್ಭದಲ್ಲಿ ಮಸ್ಕತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು.
ಕರ್ನಾಟಕ ಜಾನಪದ ಪರಿಷತ್ತು–ಮಸ್ಕತ್, ಓಮಾನ್ ಘಟಕದ ಅಧ್ಯಕ್ಷ ಕಟಪಾಡಿ ಶಿವಾನಂದ ಕೋಟ್ಯನ್, ಸದಸ್ಯರಾದ ಶತೀಶ್ ಬಾರ್ಕರ್, ಇಮ್ಯಾನುಯೆಲ್ ದಿವಾಕರ್ ಹಾಗೂ ಮಸ್ಕತ್ ಮೂಗವೀರಸ್ ಅಧ್ಯಕ್ಷ ಪದ್ಮಾಕರ ಮೆಂಡನ್, ಸದಸ್ಯರಾದ ಶೇಷಾ ಕಾಂಚನ್ ಮತ್ತು ದಿನಕರ್ ಸುವರ್ಣ ಕೋಟೆ ಅವರು ಸತೀಶ್ ಸಾಲ್ಯಾನ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಮಸ್ಕತ್ನ ಘಾಲಾ ಹೆಲ್ತ್ ಸೆಂಟರ್ನಲ್ಲಿ ಅಕ್ಟೋಬರ್ 2ರಂದು ಆಯೋಜಿಸಿರುವ 10ನೇ ವರ್ಷದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ ‘ಜೀವಧಾರೆ’ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲು ಸತೀಶ್ ಸಾಲ್ಯಾನ್ ಅವರು ಮಸ್ಕತ್ಗೆ ಆಗಮಿಸಿದ್ದಾರೆ.
ಸ್ವತಃ 53 ಬಾರಿ ರಕ್ತದಾನ ಮಾಡುವ ಮೂಲಕ ಮಾದರಿಯಾಗಿರುವ ಸತೀಶ್ ಸಾಲ್ಯಾನ್ ಅವರು ಉಡುಪಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ತುರ್ತು ಸಂದರ್ಭಗಳಲ್ಲಿ ರಕ್ತದ ವ್ಯವಸ್ಥೆ, ಸ್ವಯಂಪ್ರೇರಿತ ರಕ್ತದಾನ ಶಿಬಿರಗಳ ಆಯೋಜನೆ, ರಕ್ತದಾನಿಗಳ ಸಂಪರ್ಕ ಹಾಗೂ ರಕ್ತದಾನದ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.
ಅಗತ್ಯವಿರುವ ರೋಗಿಗಳಿಗೆ ಸಕಾಲದಲ್ಲಿ ರಕ್ತ ದೊರಕಿಸಿಕೊಡುವುದರ ಜೊತೆಗೆ, ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ನೆರವು ನೀಡುವ ಮಾನವೀಯ ಸೇವಾ ಕಾರ್ಯಗಳಲ್ಲಿಯೂ ಅವರು ಸಕ್ರಿಯರಾಗಿದ್ದಾರೆ.

ಓಮಾನ್ನ ರಕ್ತದಾನ ಚಳವಳಿಗೆ ಪ್ರೇರಣೆ
ಕಡಲಾಚೆಯ ಕನ್ನಡಿಗರು ಹಮ್ಮಿಕೊಂಡಿರುವ ರಕ್ತದಾನ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಆಗಮಿಸಿರುವ ಸತೀಶ್ ಸಾಲ್ಯಾನ್ ಅವರ ಉಪಸ್ಥಿತಿಯು ಓಮಾನ್ನ ಸ್ವಯಂಪ್ರೇರಿತ ರಕ್ತದಾನ ಚಳವಳಿಗೆ ಮತ್ತಷ್ಟು ಪ್ರೇರಣೆ ನೀಡಲಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಕಟಪಾಡಿ ಶಿವಾನಂದ ಕೋಟ್ಯನ್ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಹಾಗೂ ಗಾಂಧಿ ಜಯಂತಿ ಅಂಗವಾಗಿ ಅಕ್ಟೋಬರ್ 2ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ‘ಜೀವಧಾರೆ’ ರಕ್ತದಾನ ಶಿಬಿರ ನಡೆಯಲಿದೆ. ಓಮಾನ್ನ ವಿವಿಧ ಭಾಗಗಳಿಂದ ರಕ್ತದಾನಿಗಳು, ವೈದ್ಯರು, ಸಮಾಜಸೇವಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಕಳೆದ ಒಂದು ದಶಕದ ರಕ್ತದಾನ ಸೇವಾ ಪಯಣ ಹಾಗೂ ರಕ್ತದಾನದ ಮಹತ್ವವನ್ನು ದಾಖಲಿಸುವ ‘ಜೀವಧಾರೆ – The Ray of Life’ ಎಂಬ ವಿಶೇಷ ಮಾಹಿತಿ ಪುಸ್ತಕವೂ ಅನಾವರಣಗೊಳ್ಳಲಿದೆ.
“ರಕ್ತದಾನದಿಂದ ಜೀವದಾನ, ಸೇವೆಯಿಂದ ಮಾನವೀಯತೆಯ ಸಂದೇಶ” ಎಂಬ ಆಶಯದೊಂದಿಗೆ ನಡೆಯುತ್ತಿರುವ ‘ಜೀವಧಾರೆ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಸ್ಕತ್ಗೆ ಆಗಮಿಸಿದ ಸತೀಶ್ ಸಾಲ್ಯಾನ್ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು.


