ಕಾಪು: ಕೃಷಿ ಕ್ಷೇತ್ರದ ನೂತನ ತಂತ್ರಜ್ಞಾನ, ಸಮಗ್ರ ಕೃಷಿ ಪದ್ಧತಿ ಹಾಗೂ ವಿವಿಧ ಕೃಷಿ ಚಟುವಟಿಕೆಗಳ ಕುರಿತು ಪ್ರಾಯೋಗಿಕ ಜ್ಞಾನ ಪಡೆಯುವ ಉದ್ದೇಶದಿಂದ ಕಾಪು ಕ್ಷೇತ್ರದ 50 ಮಂದಿ ರೈತರನ್ನೊಳಗೊಂಡ ತಂಡಕ್ಕೆ ಶಿರಸಿ–ಧಾರವಾಡ ವ್ಯಾಪ್ತಿಯಲ್ಲಿ ಎರಡು ದಿನಗಳ ಶೈಕ್ಷಣಿಕ ಕೃಷಿ ಅಧ್ಯಯನ ಮತ್ತು ತರಬೇತಿ ಪ್ರವಾಸವನ್ನು ಆಯೋಜಿಸಲಾಯಿತು.
ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಉಡುಪಿ ರೈತ ಸಂಪರ್ಕ ಕೇಂದ್ರ, ಕಾಪು ವತಿಯಿಂದ “ಅಂತರರಾಷ್ಟ್ರೀಯ ರೈತ ಮಹಿಳೆಯರ ವರ್ಷ–2026”ರ ಅಂಗವಾಗಿ 2026–27ನೇ ಸಾಲಿನ ಯೋಜನೆಯಡಿ ರಾಜ್ಯದೊಳಗಿನ ಅಧ್ಯಯನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಗೆ ಒತ್ತು ಪ್ರವಾಸಕ್ಕೆ ನೇತೃತ್ವ ವಹಿಸಿದ್ದ ಕಾಪು ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಶ್ರೀಮತಿ ದಿವ್ಯಾ ಮಾತನಾಡಿ, “ಮಣ್ಣಿಗಿಂತ ಮಿಗಿಲಾದ ಬಂಗಾರವಿಲ್ಲ. ಮಣ್ಣಿನಲ್ಲಿ ಕಷ್ಟಪಡುವ ರೈತನ ಸಾಧನೆಗಿಂತ ಮಿಗಿಲಾದ ಸಾಧನೆ ಬೇರೊಂದಿಲ್ಲ. ಎಲ್ಲರಿಗೂ ಆಹಾರ ಮತ್ತು ಆರೋಗ್ಯ ನೀಡುವ ರೈತನಿಗೆ ಆರ್ಥಿಕ ಸಮಗ್ರತೆ ಅತ್ಯಂತ ಅಗತ್ಯ” ಎಂದರು.

ಕೃಷಿ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿದ್ದು, ರೈತರಿಗೆ ಕೃಷಿ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ನೇರ ಸಂಪರ್ಕ ಕಲ್ಪಿಸಿ ಅಗತ್ಯ ನೆರವು ಒದಗಿಸಬೇಕು. ನೈಜ ಆಸಕ್ತಿ ಹಾಗೂ ಶ್ರಮದಿಂದ ಕೃಷಿ ಮಾಡುವ ರೈತರ ಅಗತ್ಯತೆಗಳಿಗೆ ಸ್ಪಂದಿಸುವುದು ಎಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು.
ಹೊನ್ನಾವರದಲ್ಲಿ ಪಂಜರ ಮೀನು ಸಾಕಣೆ ಅಧ್ಯಯನ ಅಧ್ಯಯನ ಪ್ರವಾಸದ ವೇಳೆ ಹೊನ್ನಾವರ ಸೇತುವೆ ಸಮೀಪ 25 ಯುವಕರ ತಂಡ ನಡೆಸುತ್ತಿರುವ ಪಂಜರ (Cage) ಮೀನು ಸಾಕಣೆ ಕೇಂದ್ರಕ್ಕೆ ರೈತರು ಭೇಟಿ ನೀಡಿದರು. ಕೃಷಿ ಸಾಧಕ ಶ್ರೀ ಸಂಜು ಅವರು ಪಂಜರ ಮೀನು ಸಾಕಣೆಯ ತಾಂತ್ರಿಕ ವಿಧಾನ, ಮೀನಿನ ತಳಿ ಆಯ್ಕೆ ಹಾಗೂ ಸಾಕಣೆ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೃಷಿಕರ ಫಾರ್ಮ್‌ಗೆ ಭೇಟಿ ಕುಮಟಾದ ಕೃಷಿ ಕ್ಷೇತ್ರದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶ್ರೀ ಎನ್.ಡಿ. ಹೆಗಡೆ ಅವರ ಫಾರ್ಮ್ ಹಾಗೂ ನರ್ಸರಿಗೆ ರೈತರ ತಂಡ ಭೇಟಿ ನೀಡಿತು. ಸುಮಾರು 20 ಸಾವಿರಕ್ಕೂ ಅಧಿಕ ಅಡಿಕೆ ಗಿಡಗಳು ಹಾಗೂ ಲಕ್ಷಾಂತರ ರೋಗರಹಿತ ಕಾಳುಮೆಣಸಿನ ಗಿಡಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಸುತ್ತಿರುವ ಕುರಿತು ರೈತರಿಗೆ ಮಾರ್ಗದರ್ಶನ ನೀಡಲಾಯಿತು.
ಕೆವಿಕೆ ಶಿರಸಿಯಲ್ಲಿ ಸಮಗ್ರ ಕೃಷಿ ತರಬೇತಿ
ಕೃಷಿ ವಿಜ್ಞಾನ ಕೇಂದ್ರ, ಶಿರಸಿಯಲ್ಲಿ ಆಹಾರ ಭದ್ರತೆ, ಮೌಲ್ಯವರ್ಧನೆ, ಸಮಗ್ರ ಕೃಷಿ ಪದ್ಧತಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತು ತರಬೇತಿ ನೀಡಲಾಯಿತು. ವಿಷಯ ತಜ್ಞೆ ಡಾ. ವಿಜಯಲಕ್ಷ್ಮಿ ನಾಯ್ಕ್ ಅವರು ಆಹಾರ ಭದ್ರತೆ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಿದರೆ, ಸಹಾಯಕ ಪ್ರಾಧ್ಯಾಪಕ ಡಾ. ಬಿ.ಸಿ. ಕೊಳಾರ ಅವರು ಸಮಗ್ರ ಕೃಷಿ ಪದ್ಧತಿಗಳ ಕುರಿತು ತರಬೇತಿ ನೀಡಿದರು.
ಮೊರಬದಲ್ಲಿ ಯಶಸ್ವಿ ಪಶುಸಂಗೋಪನಾ ಮಾದರಿ ವೀಕ್ಷಣೆ
ಮೊರಬದ ಶ್ರೀ ಗಂಗಪ್ಪ ಕಲವಾಡ ಅವರ ಶ್ರೀ ದಾನೇಶ್ವರಿ ಫಾರ್ಮ್ ಹೌಸ್‌ಗೆ ಭೇಟಿ ನೀಡಿದ ರೈತರು ಸುಮಾರು 600 ಕುರಿ ಹಾಗೂ ಆಡುಗಳ ಸಾಕಣೆ, ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಯ ಯಶಸ್ವಿ ಮಾದರಿಗಳನ್ನು ವೀಕ್ಷಿಸಿ ಪ್ರಾಯೋಗಿಕ ಮಾಹಿತಿ ಪಡೆದರು.
ಧಾರವಾಡ ಕೃಷಿ ಮೇಳದಲ್ಲಿ ನೂತನ ತಂತ್ರಜ್ಞಾನ ಪರಿಚಯ
ಪ್ರವಾಸದ ಕೊನೆಯ ಹಂತವಾಗಿ ರೈತರು ಧಾರವಾಡ ಕೃಷಿ ಮೇಳ–2026ರಲ್ಲಿ ಭಾಗವಹಿಸಿ, ಆಧುನಿಕ ಕೃಷಿ ಯಂತ್ರೋಪಕರಣಗಳು, ನೂತನ ತಂತ್ರಜ್ಞಾನಗಳು ಹಾಗೂ ಕೃಷಿ ಕ್ಷೇತ್ರದ ವಿವಿಧ ಬೆಳವಣಿಗೆಗಳ ಕುರಿತು ನೇರ ಮಾಹಿತಿ ಪಡೆದುಕೊಂಡರು.
ತಾಂತ್ರಿಕ ಅಧಿಕಾರಿ ದಿವ್ಯಾ ಅವರಿಗೆ ರೈತರ ಅಭಿನಂದನೆ
ರೈತರಿಗೆ ಉಪಯುಕ್ತವಾಗುವ ರೀತಿಯಲ್ಲಿ ಅಧ್ಯಯನ, ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಒಳಗೊಂಡ ಪ್ರವಾಸವನ್ನು ಅಚ್ಚುಕಟ್ಟಾಗಿ ಸಂಘಟಿಸಿದ ತಾಂತ್ರಿಕ ಅಧಿಕಾರಿ ಶ್ರೀಮತಿ ದಿವ್ಯಾ ಅವರನ್ನು ಪ್ರವಾಸದಲ್ಲಿ ಭಾಗವಹಿಸಿದ ರೈತರು ಅಭಿನಂದಿಸಿದರು.
ಕಾಪು ಕ್ಷೇತ್ರದ ರೈತರ ಹಿತದೃಷ್ಟಿಯಿಂದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ನಿರಂತರವಾಗಿ ಮಾಡುತ್ತಿರುವ ಕಾರ್ಯವನ್ನು ಕಾಪು ಶಾಸಕ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಶ್ಲಾಘಿಸಿದರು. ರೈತರ ಕೃಷಿ ಸಂಬಂಧಿತ ಅಗತ್ಯತೆಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಸಂಪೂರ್ಣ ಬೆಂಬಲ ಸದಾ ಇರಲಿದೆ ಎಂದು ಅವರು ಭರವಸೆ ನೀಡಿದರು.


