ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನವರಾತ್ರಿ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 11ರಿಂದ ದೇವಿ ಆರಾಧನೆ ಆರಂಭವಾಗಲಿದ್ದು, ಜಿಲ್ಲೆಯ ಪ್ರಮುಖ ದೇವಸ್ಥಾನಗಳು ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರ ಹಾಗೂ ತಳಿರು ತೋರಣಗಳಿಂದ ಕಂಗೊಳಿಸುತ್ತಿವೆ.
ಮಂಗಳೂರು ದಸರಾಕ್ಕೆ ಸಿದ್ಧತೆ
ಮಂಗಳೂರು ದಸರಾ ಎಂದೇ ಪ್ರಸಿದ್ಧಿ ಪಡೆದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಅಕ್ಟೋಬರ್ 11ರಂದು ಶಾರದೆ, ಗಣಪತಿ ಹಾಗೂ ನವದುರ್ಗೆಯರ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಅಕ್ಟೋಬರ್ 22ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಬಾರಿ ದರ್ಬಾರ್ ಮಂಟಪವನ್ನು ಅರಮನೆ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಮಂಗಳೂರು ನಗರದ ಸುಮಾರು 25 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಅಕ್ಟೋಬರ್ 21ರಂದು ಭವ್ಯ ಮಂಗಳೂರು ದಸರಾ ಶೋಭಾಯಾತ್ರೆ ನಡೆಯಲಿದೆ.
ಉಡುಪಿ ಜಿಲ್ಲೆಯಲ್ಲೂ ನವರಾತ್ರಿ ಸಂಭ್ರಮ
ಉಡುಪಿ ಜಿಲ್ಲೆಯ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ, ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರೀ ದೇವಸ್ಥಾನ, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ನವರಾತ್ರಿ ಉತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದೆ.
ಅಕ್ಟೋಬರ್ 21ರವರೆಗೆ ವಿಶೇಷ ಪೂಜೆ, ಚಂಡಿಕಾ ಪಾರಾಯಣ, ಹವನ, ಅನ್ನಸಂತರ್ಪಣೆ, ದೀಪನಮಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಉಚ್ಚಿಲ ದಸರಾಕ್ಕೆ ವಿಶೇಷ ಮೆರುಗು
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ-2026 ನಡೆಯಲಿದೆ. ಅಕ್ಟೋಬರ್ 11ರಂದು ನವದುರ್ಗೆಯರು ಹಾಗೂ ಶ್ರೀ ಶಾರದಾಮಾತೆಯ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದ್ದು, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಕ್ಟೋಬರ್ 21ರಂದು ಬೃಹತ್ ಶೋಭಾಯಾತ್ರೆ ಹಾಗೂ ಜಲಸ್ತಂಭನ ನಡೆಯಲಿದೆ.

