HomeFresh Newsಆಳ್ವಾಸ್‌ನಲ್ಲಿ ‘‘ಎನ್‌ಕ್ಯೂಎಎಸ್ ಎಕ್ಸ್ಪ್ಲೋರೇಷನ್–2026’ ಪ್ರಾದೇಶಿಕ ಸಮ್ಮೇಳನ

ಆಳ್ವಾಸ್‌ನಲ್ಲಿ ‘‘ಎನ್‌ಕ್ಯೂಎಎಸ್ ಎಕ್ಸ್ಪ್ಲೋರೇಷನ್–2026’ ಪ್ರಾದೇಶಿಕ ಸಮ್ಮೇಳನ

ಮೂಡುಬಿದಿರೆ: ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಗುಣಮಟ್ಟದ ಸೇವೆ ಒದಗಿಸುವುದು ಕೇವಲ ನಿಯಮಗಳ ಪಾಲನೆಯಲ್ಲ, ಅದು ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತನ ವೃತ್ತಿಪರ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹೇಳಿದರು.
ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್‌ನ ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗದ ವತಿಯಿಂದ ಡಾ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ‘ಎನ್‌ಕ್ಯೂಎಎಸ್ ಎಕ್ಸ್ಪ್ಲೋರೇಷನ್–2026’ ಪ್ರಾದೇಶಿಕ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳು (ಎನ್‌ಕ್ಯೂಎಎಸ್) ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಗುಣಮಟ್ಟದ ಸೇವೆಯನ್ನು ಖಚಿತಪಡಿಸಿಕೊಳ್ಳಲು ರೂಪಿಸಲಾದ ಮಹತ್ವದ ಚೌಕಟ್ಟಾಗಿವೆ. ಇವುಗಳ ಪರಿಣಾಮಕಾರಿ ಅನುಷ್ಠಾನದಿಂದ ರೋಗಿಗಳಿಗೆ ಸುರಕ್ಷಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸಾಧ್ಯ. ಆದರೆ ಗುಣಮಟ್ಟವನ್ನು ಕೇವಲ ದಾಖಲೆಗಳು ಮತ್ತು ಪರಿಶೀಲನೆಗಳಿಗೆ ಸೀಮಿತಗೊಳಿಸದೆ, ಪ್ರತಿದಿನದ ಕೆಲಸದ ಭಾಗವಾಗಿಸಿಕೊಳ್ಳಬೇಕು. ಆಸ್ಪತ್ರೆಯ ಪ್ರತಿಯೊಂದು ವಿಭಾಗದಲ್ಲಿಯೂ ಗುಣಮಟ್ಟದ ಸೇವೆಯ ಬಗ್ಗೆ ಅರಿವು ಮತ್ತು ಜವಾಬ್ದಾರಿ ಇರಬೇಕು ಎಂದರು.

ಆಳ್ವಾಸ್ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ. ಮಹಾಬಲೇಶ್ ಶೆಟ್ಟಿ ಮಾತನಾಡಿ, ಆರೋಗ್ಯ ಸೇವೆಯಲ್ಲಿ ಗುಣಮಟ್ಟವೇ ಮೂಲಾಧಾರವಾಗಿದೆ. ರೋಗನಿರ್ಣಯ ಮಾಡುವುದು, ಚಿಕಿತ್ಸೆ ನೀಡುವುದು ಅಥವಾ ಔಷಧಿಗಳನ್ನು ಸೂಚಿಸುವುದಕ್ಕೆ ಮಾತ್ರ ಆರೋಗ್ಯ ಸೇವೆ ಸೀಮಿತವಾಗಬಾರದು. ಪ್ರತಿಯೊಬ್ಬ ರೋಗಿಗೂ ಸುರಕ್ಷಿತ, ಪರಿಣಾಮಕಾರಿ, ಸಮಯೋಚಿತ ಮತ್ತು ಸಹಾನುಭೂತಿಯಿಂದ ಕೂಡಿದ ಆರೈಕೆಯನ್ನು ಒದಗಿಸುವುದು ಆರೋಗ್ಯ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಬೇಕು ಎಂದರು.
ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಂಶುಪಾಲ ಡಾ. ಬಿ.ಎ. ಯತಿಕುಮಾರ ಸ್ವಾಮಿ ಗೌಡ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ತಾಂತ್ರಿಕ ಗೋಷ್ಠಿ, ಸಂವಾದ
ಸಮ್ಮೇಳನದ ಅಂಗವಾಗಿ ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳ ವಿವಿಧ ಆಯಾಮಗಳ ಕುರಿತು ತಜ್ಞರಿಂದ ಉಪನ್ಯಾಸಗಳು ಮತ್ತು ಸಂವಾದ ಕಾರ್ಯಕ್ರಮ ನಡೆಯಿತು.

ಮಂಗಳೂರಿನ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್‌ನ ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ. ಶಿಜಿ ಪಿ.ಜೆ.ಯವರು ‘ಎನ್‌ಕ್ಯೂಎಎಸ್:ಗುಣಮಟ್ಟದ ಚೌಕಟ್ಟಿನ ಅರಿವು’ ವಿಷಯದ ಕುರಿತು ಮಾತನಾಡಿದರು.
ಮಂಗಳೂರಿನ ಕೆಎಎಂಸಿಯ ಸ್ವಾಸ್ಥವೃತ್ತ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ರಾಘವೇಂದ್ರ ರಾವ್ ಎಸ್‌ರವರು ಎನ್‌ಕ್ಯೂಎಎಸ್: ಗುಣಮಟ್ಟದ ಎಂಟು ಆಯಾಮಗಳು–ಭಾಗ 1’ ಕುರಿತು, ಆಳ್ವಾಸ್ ಆಯುರ್ವೇದ ಕಾಲೇಜಿನ ಕಾಯಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಸುರೇಖಾ ಪೈ ಎನ್‌ಕ್ಯೂಎಎಸ್:ಗುಣಮಟ್ಟದ ಎಂಟು ಆಯಾಮಗಳು–ಭಾಗ 2’ ಕುರಿತು ಉಪನ್ಯಾಸ ನೀಡಿದರು.
‘ಪರಿಶೀಲನಾ ಪಟ್ಟಿಯನ್ನು ಮೀರಿ: ಮೌಲ್ಯಮಾಪಕರು ಮತ್ತು ಮೌಲ್ಯಮಾಪನಕ್ಕೊಳಗಾಗುವವರ ದೃಷ್ಟಿಕೋನ’ ಎಂಬ ವಿಷಯದ ಕುರಿತು ನಡೆದ ಗೋಷ್ಠಿಯಲ್ಲಿ ಕಾಟಿಪಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಯಶಸ್ವಿನಿ ಕೆ.ಎಸ್., ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಲೆನಿಟಾ ಡಿಸೋಜಾ ಹಾಗೂ ಆಳ್ವಾಸ್ ಕಾಲೇಜ್ ಆಫ್ ನರ್ಸಿಂಗ್‌ನ ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಪ್ರೊ. ನಿಕ್ಸಿ ಎನ್.ಎಂ. ಭಾಗವಹಿಸಿದರು. ಎನ್‌ಕ್ಯೂಎಎಸ್ ಮೌಲ್ಯಮಾಪನದ ಪ್ರಕ್ರಿಯೆ, ಅನುಷ್ಠಾನದಲ್ಲಿನ ಅನುಭವಗಳು ಮತ್ತು ಗುಣಮಟ್ಟದ ಮಾನದಂಡಗಳನ್ನು ದೈನಂದಿನ ಆರೋಗ್ಯ ಸೇವೆಯಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ ಕುರಿತು ಚರ್ಚಿಸಲಾಯಿತು.
ಈ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ 600ಕ್ಕೂ ಅಧಿಕ ಸಮೂದಾಯ ಆರೋಗ್ಯ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಆರೋಗ್ಯ ಕರ‍್ಯಕರ್ತರು ಭಾಗವಹಿಸಿದರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ವೀಕ್ಷಕ ಕೆ. ಅನಿಲ್ ಕುಮಾರ್, ಕಾಲೇಜಿನ ಪ್ರಾಚರ‍್ಯ ಡಾ. ಬಿ.ಎ. ಯತಿಕುಮಾರ ಸ್ವಾಮಿ ಗೌಡ ಹಾಗೂ ಉಪಪ್ರಾಂಶುಪಾಲೆ ಪ್ರೊ. ರೇಣುಕಾ, ಕರ‍್ಯಕ್ರಮದ ಸಂಯೋಜಕಿ ಪ್ರೊ. ನಿಕ್ಸಿ ಎನ್. ಇದ್ದರು.
ಕರ‍್ಯಕ್ರಮದ ಸಂಯೋಜಕಿ ಪ್ರೊ. ನಿಕ್ಸಿ ಎನ್. ಸ್ವಾಗತಿಸಿ, ಉಪಪ್ರಾಂಶುಪಾಲೆ ಪ್ರೊ. ರೇಣುಕಾ ವಂದಿಸಿ, ಉಪನ್ಯಾಸಕ ರಾಜೇಶ್ ಡಿಸೋಜಾ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments