ಸಂಪಾಜೆ ಗ್ರಾಮದ ಕೀಲಾರು, ಕೀಲಾರುಮೂಲೆ, ಕೈಪಡ್ಕ ಹಾಗೂ ನೆಲ್ಲಿಕುಮೇರಿ ಪ್ರದೇಶಗಳಲ್ಲಿ ಕಳೆದ 3 ದಿನಗಳಿಂದ ನಿರಂತರವಾಗಿ ಕಾಡಾನೆಗಳ ಹಾವಳಿ ನಡೆಯುತ್ತಿದ್ದು, ಕೃಷಿಕರು ಕಂಗಾಲಾಗಿದ್ದಾರೆ.
ಕಾಡಾನೆಗಳು ಕೃಷಿ ತೋಟಗಳಿಗೆ ನುಗ್ಗಿ ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸಿವೆ. ಕಲ್ಲುಗುಂಡಿಯ ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನದ ಕಾಂಪೌಂಡ್ಗೂ ಹಾನಿ ಮಾಡಿದ್ದು, ಕೃಷಿ ಪ್ರದೇಶಗಳ ಜತೆಗೆ ಧಾರ್ಮಿಕ ಕ್ಷೇತ್ರದ ಆಸ್ತಿಗೂ ಹಾನಿಯಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಅ.18ರಂದು ಬೆಳಗ್ಗೆಯೂ ಈ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಂಡು ದಾಂಧಲೆ ನಡೆಸಿವೆ. ನಿರಂತರವಾಗಿ ಕೃಷಿ ತೋಟಗಳಿಗೆ ನುಗ್ಗುತ್ತಿರುವ ಕಾಡಾನೆಗಳಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕೃಷಿಕರು ಪರದಾಡುವಂತಾಗಿದೆ. ಜನವಸತಿ ಪ್ರದೇಶಗಳ ಸಮೀಪವೇ ಆನೆಗಳ ಸಂಚಾರ ಕಂಡುಬರುತ್ತಿರುವುದರಿಂದ ಜನರಲ್ಲಿಯೂ ಭಯದ ವಾತಾವರಣ ನಿರ್ಮಾಣವಾಗಿದೆ.
ಕೃಷಿಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿರುವ ರೈತರಿಗೆ ಕಾಡಾನೆಗಳ ಹಾವಳಿ ದೊಡ್ಡ ಆರ್ಥಿಕ ಹೊಡೆತ ನೀಡಿದೆ. ಈಗಾಗಲೇ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ಕೃಷಿಕರು, ಮತ್ತೆ ಮತ್ತೆ ನಡೆಯುತ್ತಿರುವ ದಾಳಿಯಿಂದ ಕಂಗೆಟ್ಟಿದ್ದಾರೆ.

