ಹೆಜಮಾಡಿ: ಸಮಾಜಮುಖಿ ಸೇವೆ, ಆರೋಗ್ಯ ಜಾಗೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಆರಂಭಗೊಂಡ ವಿಹಾನ್ ಚಾರಿಟೇಬಲ್ ಟ್ರಸ್ಟ್ (ರಿ.), ಹೆಜಮಾಡಿ ಸಂಸ್ಥೆಯ ಉದ್ಘಾಟನಾ ಸಮಾರಂಭದ ಅಂಗವಾಗಿ ಹೆಜಮಾಡಿ ಬಿಲ್ಲವರ ಸಂಘದ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಸಮಾಜದ ಅಭಿವೃದ್ಧಿಯಲ್ಲಿ ಸೇವಾ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಆರೋಗ್ಯದ ಸಮಸ್ಯೆಗಳಿಂದ ಬಳಲುವವರಿಗೆ ನೆರವಾಗುವುದು, ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ವೈದ್ಯಕೀಯ ಸೇವೆಗಳನ್ನು ತಲುಪಿಸುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಜನಪರ ಕಾರ್ಯಕ್ರಮಗಳು ಸಮಾಜದಲ್ಲಿ ಸಹಕಾರ ಮತ್ತು ಮಾನವೀಯತೆಯ ಮನೋಭಾವವನ್ನು ಬಲಪಡಿಸುತ್ತವೆ ಎಂದು ಹೇಳಿದರು.

ಆಶೀರ್ವಚನ ನೀಡಿದ ಕೇಮಾರು ಸಾಂದೀಪನಿ ಮಠದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಮಾನವ ಸೇವೆಯೇ ನಿಜವಾದ ಸೇವೆ ಎಂಬ ಸಂದೇಶವನ್ನು ಸಾರುತ್ತಾ, ಸಮಾಜದ ನೋವಿಗೆ ಸ್ಪಂದಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಸೇವಾ ಕಾರ್ಯಗಳು ಜಾತಿ, ಧರ್ಮ ಹಾಗೂ ಆರ್ಥಿಕ ಭೇದಗಳನ್ನು ಮೀರಿ ಎಲ್ಲರಿಗೂ ತಲುಪಿದಾಗ ಸಮಾಜದಲ್ಲಿ ಪ್ರೀತಿ, ಸಾಮರಸ್ಯ ಮತ್ತು ಮಾನವೀಯತೆ ವೃದ್ಧಿಯಾಗುತ್ತದೆ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಅಧ್ಯಕ್ಷೆ ದೀಕ್ಷಾ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, “ಸೇವೆಯೇ ಸಂಕಲ್ಪ, ಮಾನವೀಯತೆಯೇ ಧ್ಯೇಯ” ಎಂಬ ಉದ್ದೇಶದೊಂದಿಗೆ ಟ್ರಸ್ಟ್ ಆರಂಭಿಸಲಾಗಿದೆ. ಅಗತ್ಯವಿರುವವರಿಗೆ ಆರೋಗ್ಯ ಸೇವೆ ಒದಗಿಸುವುದು, ಬಡವರಿಗೆ ನೆರವಾಗುವುದು ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಸಂಸ್ಥೆಯ ಪ್ರಮುಖ ಆಶಯವಾಗಿದೆ ಎಂದು ತಿಳಿಸಿದರು.
ಕಾರ್ನಾಡ್ ಇಮ್ಯಾಕ್ಯುಲೇಟ್ ಕನ್ಸೆಪ್ಷನ್ ಚರ್ಚ್‌ನ ಧರ್ಮಗುರು ರೆ. ಫಾ. ಅಂಟನಿ ಶೇರಾ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, ಪೂರ್ಣಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಯಶೋಧ ಪಡುಬಿದ್ರಿ, ಕಾಪು ತಾಲೂಕು ಭೂ ನ್ಯಾಯಮಂಡಳಿ ಸದಸ್ಯ ರಮೀಜ್ ಹುಸೇನ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ರವಿ ಕೋಟ್ಯಾನ್, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ ಹಾಗೂ ಜೈ ಕರ್ನಾಟಕ ಯುವ ಸಂಸ್ಥೆಯ ಅಧ್ಯಕ್ಷ ಪ್ರಬೋಧ್ ಚಂದ್ರ ಹೆಜಮಾಡಿ ಸಂದರ್ಭೋಚಿತವಾಗಿ ಮಾತನಾಡಿ, ಟ್ರಸ್ಟ್‌ನ ಸಮಾಜಮುಖಿ ಪ್ರಯತ್ನಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಮಾಜಸೇವಕ ಅಬ್ದುಲ್ ಅಜೀಜ್ ಹೆಜಮಾಡಿ, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ನಿರ್ಮಲಾ, ಹೆಜಮಾಡಿ ಬಿಲ್ಲವರ ಸಂಘದ ಉಪಾಧ್ಯಕ್ಷ ಸುಧೀರ್ ಕರ್ಕೇರ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಶಾರದ ಪ್ರಸಾದ್ ಹಾಗೂ ಸಾಗರ್ ಆಸ್ಪತ್ರೆಯ ನೇತ್ರ ವಿಭಾಗದ ವೈದ್ಯಾಧಿಕಾರಿ ಡಾ. ಸಾಗರ್ ಉಪಸ್ಥಿತರಿದ್ದರು.
ದೀಕ್ಷಾ ಕೆ. ಸ್ವಾಗತಿಸಿದರು. ವಿಶಾಲ್ ಬಂಗೇರ ವಂದಿಸಿದರು. ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.


