HomeFresh Newsರೇಷನ್ ಕಾರ್ಡ್ ಇ-ಕೆವೈಸಿ ಗೊಂದಲಗಳಿಗೆ ತೆರೆ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ - ಶಾಸಕ ಗುರ್ಮೆ ಸುರೇಶ್...

ರೇಷನ್ ಕಾರ್ಡ್ ಇ-ಕೆವೈಸಿ ಗೊಂದಲಗಳಿಗೆ ತೆರೆ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಕಾಪು: ರೇಷನ್ ಕಾರ್ಡ್ ಇ-ಕೆವೈಸಿ (e-KYC) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ತಾಂತ್ರಿಕ ಹಾಗೂ ವ್ಯಾವಹಾರಿಕ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ತುರ್ತು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಕ್ಷೇತ್ರದ ನಾಗರಿಕರಿಂದ ಇ-ಕೆವೈಸಿ ಕುರಿತಾಗಿ ಕೆಲವೊಂದು ಸಮಸ್ಯೆಗಳು ತಮ್ಮ ಗಮನಕ್ಕೆ ಬಂದ ಕೂಡಲೇ ಸ್ಪಂದಿಸಿರುವ ಶಾಸಕರು, ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದ್ದಾರೆ.
ಸಾರ್ವಜನಿಕರಿಂದ ಕೇಳಿಬಂದ ಪ್ರಮುಖ ಸಮಸ್ಯೆಗಳು:
: ನಿಗದಿತ ಗಡುವಿನೊಳಗೆ ವಯೋಸಹಜ ಕಾರಣದಿಂದ ಅಥವಾ ತಾಂತ್ರಿಕ ತೊಂದರೆಯಿಂದ ಇ-ಕೆವೈಸಿ ಮಾಡಿಸಲು ವಿಫಲರಾದರೆ, ಅಂಥವರ ಹೆಸರುಗಳನ್ನು ರೇಷನ್ ಕಾರ್ಡ್‌ನಿಂದ ಕೈಬಿಡಲಾಗುತ್ತದೆ ಎಂಬ ಆತಂಕದಿಂದ ಬಡವರಿಗೆ ಸಿಗಬೇಕಾದ ಉಚಿತ ಅಕ್ಕಿ ಮತ್ತು ಹಣಕಾಸಿನ ನೆರವು (DBT) ನಿಂತುಹೋಗಬಹುದು ಎಂಬ ಭಯವಿತ್ತು.
ವೃದ್ಧರು, ಹಾಸಿಗೆ ಹಿಡಿದ ರೋಗಿಗಳು ಅಥವಾ ವಿಕಲಚೇತನರು ನೇರವಾಗಿ ನ್ಯಾಯಬೆಲೆ ಅಂಗಡಿಗೆ (Ration Shop) ತೆರಳಿ ಬೆರಳಿನ ಗುರುತು (Fingerprint) ನೀಡುವುದು ಕಷ್ಟಕರವಾಗಿದ್ದು, ಬೆರಳಿನ ರೇಖೆಗಳು ಸವೆದಿರುವ ಹಿರಿಯರಿಗೆ ಬಯೋಮೆಟ್ರಿಕ್ ಮ್ಯಾಚ್ ಆಗದೇ ಪರದಾಡುವಂತಾಗಿತ್ತು.
ಸರ್ವರ್‌ ಸಮಸ್ಯೆ, ಆಧಾರ್ ಜತೆ ಮೊಬೈಲ್ ಸಂಖ್ಯೆ ಲಿಂಕ್ ಆಗದಿರುವುದು ಅಥವಾ ಮುಖದ ಗುರುತು ಸರಿಯಾಗಿ ಕ್ಯಾಪ್ಚರ್ ಆಗದೆ ಇರುವುದರಿಂದ ಸಾರ್ವಜನಿಕರು ಪದೇ ಪದೇ ಅಲೆಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಪ್ರಾರಂಭ ದಲ್ಲಿ ಅನೇಕ ದಾಖಲಾತಿ ಗಳನ್ನು ಒಟ್ಟು ಗುಡಿಸುವಲ್ಲಿ , ಸಮಸ್ಯೆ ಯಾಗಿತ್ತು
ಈ ಎಲ್ಲಾ ದೂರುಗಳ ಕುರಿತು ಪ್ರತಿಕ್ರಿಯಿಸಿರುವ ಶಾಸಕರು, ಇಲಾಖೆಯ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. “ಎಲ್ಲರೂ ಒಂದಾಗಿ ನಮ್ಮ ಕಾಪುವಿನ ಸಾರ್ವಜನಿಕರ ಹಿತಾಸಕ್ತಿಗಾಗಿ ಕೆಲಸ ಮಾಡೋಣ” ಎಂದು ಅವರು ಕರೆ ನೀಡಿದ್ದಾರೆ.
ರೇಷನ್ ಕಾರ್ಡ್ ಇ-ಕೆವೈಸಿ ಎಂದರೇನು? ಇದರ ಪ್ರಮುಖ ಉದ್ದೇಶಗಳು:
ಪಡಿತರ ಚೀಟಿಯಲ್ಲಿ (Ration Card) ಇರುವ ಪ್ರತಿಯೊಬ್ಬ ಸದಸ್ಯರ ಅಸ್ತಿತ್ವ ಮತ್ತು ಸರಿಯಾದ ಮಾಹಿತಿಯನ್ನು ಆಧಾರ್ ದತ್ತಾಂಶದೊಂದಿಗೆ ತಾಳೆ ಮಾಡಿ ಖಚಿತಪಡಿಸಿಕೊಳ್ಳುವುದೇ ಇ-ಕೆವೈಸಿ ಆಗಿದೆ. ರೇಷನ್ ಕಾರ್ಡ್‌ನಲ್ಲಿರುವ ಪ್ರತಿಯೊಬ್ಬ ಸದಸ್ಯರೂ (ಮಕ್ಕಳಿಂದ ಹಿಡಿದು ಹಿರಿಯರವರೆಗೆ) ತಮ್ಮ ವೈಯಕ್ತಿಕ ಬಯೋಮೆಟ್ರಿಕ್ ಅಥವಾ ಒಟಿಪಿ/ಫೇಸ್ ಅಥೆಂಟಿಕೇಶನ್ ಮೂಲಕ ಇದನ್ನು ಮಾಡಿಸುವುದು ಕಡ್ಡಾಯವಾಗಿದೆ.
ನಕಲಿ ಕಾರ್ಡ್‌ಗಳ ಪತ್ತೆ: ಅನೇಕ ಕಡೆಗಳಲ್ಲಿ ಮೃತರಾದವರ ಹೆಸರಿನಲ್ಲಿ ಅಥವಾ ಬೇರೆಡೆ ವಾಸವಿರುವವರ ಹೆಸರಿನಲ್ಲಿ ಪಡಿತರ ಪಡೆಯುವುದನ್ನು ತಪ್ಪಿಸಿ, ನಕಲಿ ಅಥವಾ ಅನರ್ಹ ರೇಷನ್ ಕಾರ್ಡ್‌ಗಳನ್ನು ಪತ್ತೆಹಚ್ಚಿ ರದ್ದುಪಡಿಸಬಹುದು.
ನೇರ ಸೌಲಭ್ಯ ತಲುಪುವಿಕೆ: ಸರ್ಕಾರದಿಂದ ಸಿಗುವ ಉಚಿತ ಅಕ್ಕಿ (ಅನ್ನಭಾಗ್ಯ ಯೋಜನೆ) ಅಥವಾ ಇತರೆ ಸಬ್ಸಿಡಿಗಳು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ನಿಜವಾದ ಅರ್ಹ ಬಡವರಿಗೆ ತಲುಪುವುದನ್ನು ಇದು ಖಚಿತಪಡಿಸುತ್ತದೆ.
ಪಾರದರ್ಶಕತೆ: ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (PDS) ಪಾರದರ್ಶಕತೆ ತರಲು ಹಾಗೂ ಅಕ್ರಮವಾಗಿ ಪಡಿತರ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಇದು ಸಹಕಾರಿ.
ಕುಟುಂಬದಲ್ಲಿ ಹೊಸ ಸದಸ್ಯರ ಸೇರ್ಪಡೆ, ಮದುವೆಯಾದವರ ಹೆಸರು ತೆಗೆಸುವುದು ಅಥವಾ ವಿಳಾಸ ಬದಲಾವಣೆ ಮುಂತಾದ ಮಾಹಿತಿಗಳನ್ನು ನಿಖರವಾಗಿ ನವೀಕರಿಸಲು ಇದು ಸಹಾಯಕವಾಗಿದೆ.
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ನೀಡಿರುವ ಕಾಪು ಆಹಾರ ಇಲಾಖೆಯ ಅಧಿಕಾರಿ ರೂಪೇಶ್ ಅವರು ಮಾತನಾಡಿ, “ಪಡಿತರ ಚೀಟಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ಸಾರ್ವಜನಿಕರು ನೇರವಾಗಿ ಆಹಾರ ಇಲಾಖೆಯನ್ನು ಸಂಪರ್ಕಿಸಬಹುದು” ಎಂದು ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments