HomeFresh Newsಸರ್ಕಾರಿ ವಸತಿಗೃಹದಲ್ಲಿ ಮಹಿಳೆ ಮೃ*ತ್ಯು:ಪತಿಯ ವಿರುದ್ಧ ಕೊಲೆ ಆರೋಪ

ಸರ್ಕಾರಿ ವಸತಿಗೃಹದಲ್ಲಿ ಮಹಿಳೆ ಮೃ*ತ್ಯು:ಪತಿಯ ವಿರುದ್ಧ ಕೊಲೆ ಆರೋಪ

ಬಂಟ್ವಾಳ: ಕಾವಳಪಡೂರು ಗ್ರಾಮದ ವಗ್ಗದಲ್ಲಿರುವ ಸರ್ಕಾರಿ ವಸತಿಗೃಹದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಪತಿಯ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೇಲಸಂಗ ಗ್ರಾಮದ ಸುನೀತಾ ಮಹಾದೇವ್ ದೇಸಂಗಿ (34) ಮೃತಪಟ್ಟವರು. ಇವರ ಪತಿ ಸಂಜೀವ ಕುಮಾರ್ (36) ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗದ್ಯಾಳ ಗ್ರಾಮದ ನಿವಾಸಿಯಾಗಿದ್ದು, ವಗ್ಗದಲ್ಲಿ ಗುತ್ತಿಗೆ ಆಧಾರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸುನೀತಾ ಅವರು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಶುಶೂಷಾಧಿಕಾರಿಯಾಗಿ ಸರ್ಕಾರಿ ಕೆಲಸ ಮಾಡುತ್ತಿದ್ದರು. ಪತ್ನಿಯ ಮಾಸಿಕ ವೇತನದ ಹಣ ನೀಡುವ ವಿಚಾರದಲ್ಲಿ ಪತಿ ಆಗಾಗ ತಕರಾರು ಮಾಡುತ್ತಿದ್ದು, ಈ ಹಿಂದೆ ಹಲ್ಲೆ ನಡೆಸಿದ್ದರೆನ್ನಲಾಗಿದೆ. ಈ ವಿಚಾರದಲ್ಲಿ ಎರಡೂ ಕುಟುಂಬಗಳ ನಡುವೆ ರಾಜಿ ಸಂಧಾನವೂ ನಡೆದಿತ್ತು.
ಅ. 22ರ ರಾತ್ರಿ ಸುನೀತಾ ಅವರು ತಮ್ಮ ಸಹೋದರ ಅರುಣ್ ಮಹಾದೇವ್ ದೇಸಂಗಿ ಅವರಿಗೆ ಕರೆ ಮಾಡಿ, ಪತಿ ಹಣದ ವಿಚಾರದಲ್ಲಿ ಮತ್ತೆ ಕಿರುಕುಳ ನೀಡುತ್ತಿದ್ದು, ಹಲ್ಲೆ ನಡೆಸುತ್ತಿರುವುದಾಗಿ ತಿಳಿಸಿ ತಕ್ಷಣ ಬರುವಂತೆ ಹೇಳಿದ್ದರು ಎನ್ನಲಾಗಿದೆ. ಬಳಿಕ ಅ. 23ರ ಮುಂಜಾನೆ ಸಂಜೀವಕುಮಾ‌ರ್ ಅವರ ಮೊಬೈಲ್‌ನಿಂದ ಕರೆ ಮಾಡಿ, ಸುನೀತಾ ಮಂಚದಿಂದ ಬಿದ್ದು ಪ್ರಜ್ಞೆ ತಪ್ಪಿದ್ದು, ಹೃದಯ ಬಡಿತ ಇಲ್ಲದ ಕಾರಣ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿದ್ದ. ಸಹೋದರ ಅರುಣ್ ಅವರು ತಾಯಿಯೊಂದಿಗೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ವಿಚಾರಿಸಿದಾಗ, ಮುಂಜಾನೆ 4.30ರ ವೇಳೆಗೆ ಸುನೀತಾ ಅವರನ್ನು ಆಸ್ಪತ್ರೆಗೆ ಕರೆತಂದಾಗಲೇ ಮೃತಪಟ್ಟಿರುವುದಾಗಿ ತಿಳಿದುಬ೦ದಿದೆ.
ಶವಾಗಾರದಲ್ಲಿದ್ದ ಮೃತದೇಹವನ್ನು ಪರಿಶೀಲಿಸಿದಾಗ ಹಣೆ, ಕುತ್ತಿಗೆ ಹಾಗೂ ತಲೆಯ ಭಾಗದಲ್ಲಿ ಗಾಯಗಳು ಮತ್ತು ಊತ ಕ೦ಡುಬಂದಿದ್ದು, ಮೂಗು ಹಾಗೂ ಬಾಯಿಯಿ೦ದ ರಕ್ತ ಬಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ವೇತನದ ಹಣದ ವಿಚಾರದಲ್ಲಿ ಉಂಟಾದ ತಕರಾರಿನ ಹಿನ್ನೆಲೆಯಲ್ಲಿ ಪತಿ ಸಂಜೀವಕುಮಾರ್ ಅವರು ಸುನೀತಾ ಅವರಿಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಶಂಕೆಯಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಹೋದರ ಅರುಣ್ ಮಹಾದೇವ್ ದೇಸಂಗಿ ನೀಡಿದ ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿ ನ್ಯಾಯಲಯಕ್ಕೆ ಹಾಜರು ಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments