ಮಂಗಳೂರು: ನಗರದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ನೂತನ ರೆಕ್ಟರ್ ಆಗಿ ಫಾ. ರೊನಾಲ್ಡ್ ಪಾಯ್ಸ್ ಎಸ್.ಜೆ. ಅವರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ರೆಕ್ಟರ್ ಆಗಿರುವ ಫಾ. ಬ್ರಾಯಾನ್ ಪೆರೇರಾ ಎಸ್.ಜೆ. ಅವರು ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ನೂತನ ಪ್ರಾಂತಾಧಿಕಾರಿಯಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
ಯೇಸುಸಭೆಯ (ಜೆಸ್ವಿಟ್ ಸಭೆ) ಸರ್ವೋಚ್ಚ ಮುಖ್ಯಸ್ಥರಾದ ಫಾ. ಆರ್ಟುರೊ ಅಬಾಸ್ಕಲ್ ಸೋಸಾ ಅವರು ಅ.28ರಂದು ಹೊರಡಿಸಿದ ಪತ್ರದಲ್ಲಿ ಈ ನೇಮಕವನ್ನು ಪ್ರಕಟಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. ಫಾ. ರೊನಾಲ್ಡ್ ಅವರು ಧಾರ್ಮಿಕ ಹಾಗೂ ಪಾಲನಾ ಸೇವೆ, ಜೆಸ್ವಿಟ್ ಸಭೆಯ ಧಾರ್ಮಿಕ ತರಬೇತಿ, ಶೈಕ್ಷಣಿಕ ಆಡಳಿತ, ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ನಾಯಕತ್ವ ಕ್ಷೇತ್ರಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಸಮಾಲೋಚನೆ ಮತ್ತು ಮನೋವಿಜ್ಞಾನದಲ್ಲಿ ಅವರು ಪಡೆದಿರುವ ಉನ್ನತ ಶಿಕ್ಷಣವು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಸಮುದಾಯವನ್ನು ಮುನ್ನಡೆಸುವ ಅವರ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ನೀಡಲಿದೆ. ಶೈಕ್ಷಣಿಕ ಶ್ರೇಷ್ಠತೆ, ವ್ಯಕ್ತಿತ್ವ ವಿಕಸನ ಮತ್ತು ಸಮಗ್ರ ಶಿಕ್ಷಣಕ್ಕೆ ಆದ್ಯತೆ ನೀಡುವ ಸಂಸ್ಥೆಯ ಧ್ಯೇಯವನ್ನು ಮುಂದುವರಿಸುವ ಜವಾಬ್ದಾರಿ ಅವರ ಮೇಲಿದೆ.
ಮೈಸೂರು ಧರ್ಮಪ್ರಾಂತ್ಯದ ದೊರ್ನಹಳ್ಳಿಯವರಾದ ಫಾ. ರೊನಾಲ್ಡ್ ಅವರು 2000ರ ಜೂನ್ 16ರಂದು ಆಂಧ್ರಪ್ರದೇಶದ ಗುಂಟೂರಿನ ಆನಂದ ಜ್ಯೋತಿ ನವಶಿಕ್ಷಣ ಕೇಂದ್ರದಲ್ಲಿ ಯೇಸುಸಭೆಗೆ ಸೇರ್ಪಡೆಗೊಂಡರು. 2002ರಿಂದ 2003ರವರೆಗೆ ತಿರುವನಂತಪುರದಲ್ಲಿ ಜೂನಿಯರೇಟ್ ತರಬೇತಿ ಪಡೆದು, ಧಾರವಾಡದಲ್ಲಿ ಕಲಾ ಪದವಿ, ಪುಣೆಯ ಜ್ಞಾನ ದೀಪದಲ್ಲಿ ತತ್ವಶಾಸ್ತ್ರ ಹಾಗೂ ಅಮೆರಿಕದ ಬರ್ಕ್ಲಿಯಲ್ಲಿ ಧರ್ಮಶಾಸ್ತ್ರ ಅಧ್ಯಯನವನ್ನು ನಡೆಸಿದ್ದಾರೆ. 2012ರ ಡಿಸೆಂಬರ್ 8ರಂದು ಅವರು ಗುರುದೀಕ್ಷೆ ಪಡೆದರು. 2016ರಲ್ಲಿ ಜಾರ್ಖಂಡ್ನ ಹಜಾರಿಬಾಗ್ನ ಸಿತಾಗಢದಲ್ಲಿ ಟರ್ಷಿಯನ್ ತರಬೇತಿಯನ್ನು ಪೂರ್ಣಗೊಳಿಸಿದರು. ಫಾ. ರೊನಾಲ್ಡ್ ಅವರು ಬೆಂಗಳೂರಿನ ಸಂಪೂರ್ಣ ಮಾಂಟ್ಫೋರ್ಟ್ ಕಾಲೇಜಿನಿಂದ 2019ರಲ್ಲಿ ಸಮಾಲೋಚನೆ ಮತ್ತು ಮನೋವಿಜ್ಞಾನದಲ್ಲಿ ವಿಜ್ಞಾನ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. 2023ರಲ್ಲಿ ಹೈದರಾಬಾದ್ನ ಸಿಸಿಪಿಐ ಸಂಸ್ಥೆಯಲ್ಲಿ ನೋವು ಮತ್ತು ಆಘಾತ ನಿರ್ವಹಣೆಯ ಬಹು ಆಯಾಮದ ವಿಧಾನಗಳ ಕುರಿತು ವಿಶೇಷ ತರಬೇತಿ ಪಡೆದಿದ್ದಾರೆ. 2022ರಲ್ಲಿ ಶೆಂಬಗನೂರಿನ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಇಗ್ನೇಷಿಯನ್ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದಾರೆ.
ಫಾ. ರೊನಾಲ್ಡ್ ಅವರು ತಮ್ಮ ಸೇವಾವಧಿಯಲ್ಲಿ ಧಾರ್ಮಿಕ ಪಾಲನಾ ಸೇವೆ, ಜೆಸ್ವಿಟ್ ತರಬೇತಿ, ಆಧ್ಯಾತ್ಮಿಕ ಮಾರ್ಗದರ್ಶನ, ಶಿಕ್ಷಣ ಮತ್ತು ಆಡಳಿತ ಕ್ಷೇತ್ರಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಮೈಸೂರಿನ ಸಂತ ಫಿಲೋಮಿನಾ ಚರ್ಚ್ನಲ್ಲಿ ಧಾರ್ಮಿಕ ಸೇವೆ ಬಳಿಕ ಬೆಂಗಳೂರಿನ ನವಸಾಧನಾ ಕೇಂದ್ರದಲ್ಲಿ ವೋಕೇಶನ್ ಪ್ರೊಮೋಟರ್ ಹಾಗೂ ಪ್ರೀ-ನೊವಿಶಿಯೇಟ್ ನಿರ್ದೇಶಕರಾಗಿ, ಸಂತ ಜೋಸೆಫ್ ಸಂಜೆ ಕಾಲೇಜಿನಲ್ಲಿ ಎಂ.ಬಿ.ಎ. ಟ್ವಿನ್ನಿಂಗ್ ಕಾರ್ಯಕ್ರಮದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಬಳಿಕ 2019ರಿಂದ 2020ರವರೆಗೆ ಮಂಗಳೂರಿನ ಫಾತಿಮಾ ರಿಟ್ರೀಟ್ ಹೌಸ್ನ ಆಧ್ಯಾತ್ಮಿಕ ಕೇಂದ್ರದಲ್ಲಿ ಆಡಳಿತ ನಿರ್ವಾಹಕ ಹಾಗೂ ಕಾರ್ಯಕ್ರಮ ಸಂಯೋಜಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. 2021ರಿಂದ 2025ರವರೆಗೆ ಮಂಗಳೂರಿನ ಜೆಸ್ವಿಟ್ ವಿದ್ಯಾರ್ಥಿನಿಲಯ ಆಗಿರುವ ಆಶಾಕಿರಣದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ನೂತನ ರೆಕ್ಟರ್ ಆಗಿ ಫಾ. ರೊನಾಲ್ಡ್ ಅವರು ಸಂಸ್ಥೆಯ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಇತರ ಪಾಲುದಾರರೊಂದಿಗೆ ಸಹಕರಿಸಿ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಧ್ಯೇಯ ಮತ್ತು ಜೆಸ್ವಿಟ್ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸಲಿದ್ದಾರೆ. ಅವರ ನೂತನ ಜವಾಬ್ದಾರಿಯು ಯಶಸ್ವಿಯಾಗಲಿ ಎಂದು ಸಂಸ್ಥೆಯು ಪ್ರಕಟನೆಯಲ್ಲಿ ಹಾರೈಸಿದೆ.

